ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ನಾಳೆ ಕೊನೆದಿನ
ಬೆಂಗಳೂರು: ೨೦೧೯ರ ಏಪ್ರಿಲ್‌ಗೂ ಮುನ್ನ ನೋಂದಣಿಯಾಗಿರುವ ವಾಹನಗಳಿಗೆ ಅತಿ ಸುರಕ್ಷಿತ ನಂಬರ್ ಪ್ಲೇಟ್(ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ ಶನಿವಾರ ಅಂತಿಮ ದಿನವಾಗಿದೆ. ಅಳವಡಿಸಿಕೊಳ್ಳದ ವಾಹನ ಮಾಲೀಕರು ದಂಡ ತೆರುವ ಅನಿವಾರ್ಯತೆ ಸೃಷ್ಟಿಯಾಗಲಿದೆ.
ವಾಹನಗಳ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಜಾರಿಗೊಳಿಸಿದ ಈ ಯೋಜನೆಯ ಅನುಷ್ಠಾನಕ್ಕೆ ಈಗಾಗಲೇ ನಾಲ್ಕು ಬಾರಿ ಕಾಲಾವಕಾಶ ವಿಸ್ತರಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ ಶೇ ೫೦ರಷ್ಟು ವಾಹನಗಳು ಅತಿಸುರಕ್ಷಿತ ಸಂಖ್ಯಾಫಲಕ ಅಳವಡಿಸಿಕೊಂಡಿಲ್ಲ ಎನ್ನುವ ಕಾರಣಕ್ಕೆ ಕಳೆದ ಮೂರು ತಿಂಗಳ ಹಿಂದೆ ನಾಲ್ಕನೇ ಬಾರಿಗೆ ಅವಧಿ ವಿಸ್ತರಿಸಿ ಸೆಪ್ಟಂಬರ್ ೧೫ಕ್ಕೆ ಕೊನೆ ದಿನಾಂಕ ನಿಗದಿಪಡಿಸಲಾಗಿತ್ತು.
ಅಳವಡಿಕೆಗೆ ಹರಸಾಹಸ: ವಾಹನ ತಯಾರಿಕಾ ಕಂಪೆನಿ, ಏಜೆನ್ಸಿಗಳ ಮೂಲಕವೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ವಾಹನಗಳಿಗೆ ಅಳವಡಿಕೆ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ ೨ ಕೋಟಿಗೂ ಅಧಿಕ ವಾಹನಗಳಿದ್ದು, ಸದ್ಯಕ್ಕೆ ೧.೫೯ ಕೋಟಿ ವಾಹನಗಳು ಮಾತ್ರ ಅಧಿಕೃತವಾಗಿ ಹೊಸ ಸಂಖ್ಯಾಫಲಕ ಅಳವಡಿಸಿಕೊಂಡಿವೆ. ಕೊನೆಯ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ತರಾತುರಿಯಲ್ಲಿ ವಾಹನ ಮಾಲೀಕರು ಮುಗಿಬಿದ್ದು ಹೊಸ ನಂಬರ್ ಪ್ಲೇಟ್ ಹಾಕಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
೪ ಬಾರಿ ಗಡುವು ವಿಸ್ತರಣೆ: ಮೊದಲಿಗೆ ೨೦೨೩ರ ಆಗಸ್ಟ್ನಲ್ಲಿಯೇ ರಾಜ್ಯದ ಎಲ್ಲಾ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆ ಹೆಚ್‌ಎಸ್‌ಆರ್‌ಪಿಗೆ ಸೂಚನೆ ನೀಡಿತ್ತು. ಬಳಿಕ ನವೆಂಬರ್ ೧೬ರವರೆಗೆ ಸಮಾಯಾವಕಾಶ ವಿಸ್ತರಣೆಯಾಗಿತ್ತು. ನಂತರದಲ್ಲೂ ಬಹಳಷ್ಟು ವಾಹನಗಳ ಮಾಲೀಕರು ಅತಿಸುರಕ್ಷಿತ ನಂಬರ್ ಪ್ಲೇಟ್ ಹಾಕಿಸಿಕೊಳ್ಳದ ಕಾರಣಕ್ಕೆ ಬೇಡಿಕೆ ಮೇರೆಗೆ ಸಾರಿಗೆ ಇಲಾಖೆ ೨೦೨೪ರ ಮೇ೩೧ರವರೆಗೆ ವಿಸ್ತರಿಸಿತ್ತು. ಇದೀಗ ಸೆಪ್ಟಂಬರ್ ೧೫ ಅಂತಿಮ ಗಡುವಾಗಿದೆ. ಇನ್ನೂ ಸಾವಿರಾರು ವಾಹನಗಳು ಅಳವಡಿಸಿಕೊಳ್ಳದದ ಹಿನ್ನೆಲೆಯಲ್ಲಿ ದಂಡ ಪ್ರಯೋಗಕ್ಕೆ ಒಳಗಾಗಬೇಕಾಗಿದೆ.
ಈಗಾಗಲೇ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ನಾಲ್ಕು ಬಾರಿ ಗಡುವು ವಿಸ್ತರಿಸಲಾಗಿತ್ತು. ಯಾವುದೇ ಕಾರಣಕ್ಕೂ ಮತ್ತೆ ಕಾಲಾವಕಾಶ ವಿಸ್ತರಿಸುವ ಪ್ರಶ್ನೆಯೇ ಇಲ್ಲ. ಇನ್ನೇನಿದ್ದರೂ ದಂಡ ಪಾವತಿಗೆ ಸಿದ್ದರಾಗಬೇಕಿದೆ.
ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು