For the best experience, open
https://m.samyuktakarnataka.in
on your mobile browser.

ಹೆಜ್ಜೆ ಗುರುತಿಗಾಗಿ ಎಂದಿಗೂ ಹಾರಬಾರದು

03:00 AM Jun 25, 2024 IST | Samyukta Karnataka
ಹೆಜ್ಜೆ ಗುರುತಿಗಾಗಿ ಎಂದಿಗೂ ಹಾರಬಾರದು

ಪ್ರಸ್ತುತದ ಮಾನವನ ಸಮಸ್ಯೆ 'ಸ್ವಾತಂತ್ರ್ಯ'! ನಿಮ್ಮನ್ನು ನೀವು ಶೋಚನೀಯವಾಗಿಸಿಕೊಳ್ಳಲು, ಸಂತೋಷದಾಯಕವಾಗಿ ಇರಿಸಿಕೊಳ್ಳಲು, ದೈವತ್ವಕ್ಕೇರಲು, ದಾನವರಾಗಲು ಸ್ವತಂತ್ರರಿದ್ದೀರಿ. ಸಾಕಷ್ಟು ವಿಕಸನಗೊಂಡು ಪ್ರಬುದ್ಧ ಆಯ್ಕೆಮಾಡಲು ಶಕ್ತರಿದ್ದೀರಿ ಎಂಬ ಕಾರಣದಿಂದ ಪ್ರಕೃತಿ ನಿಮಗೆ ಈ ಸ್ವಾತಂತ್ರ್ಯ ನೀಡಿದೆ. ಏಕೆಂದರೆ, ಪ್ರಕೃತಿ ನಿಮ್ಮ ಬುದ್ಧಿಮತ್ತೆಯನ್ನು ನಂಬಿದೆ. ಆದರೆ ದುರದೃಷ್ಟವಶಾತ್ ಆ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಮಾನವ ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತಿದ್ದಾನೆ! ಪ್ರತಿಯೊಬ್ಬ ಮನುಷ್ಯನೂ ದೈವಿಕನಾಗುವ ಪ್ರಕ್ರಿಯೆಯಲ್ಲಿದ್ದಾನೆ. ಪ್ರಶ್ನೆಯಿರುವುದು ಸಮಯದಲ್ಲಿ, ಅಷ್ಟೆ. ತನ್ನೊಳಗಿನ ಪಶುಪ್ರವೃತ್ತಿಯನ್ನು ಕರಗಿಸುವುದೇ ದೈನಂದಿನ ಅಧ್ಯಾತ್ಮಿಕ ಪ್ರಕ್ರಿಯೆಯ ಗುರಿಯಾಗಿದೆ. ಸತ್ಯವು ಬಹುಆಯಾಮಗಳಲ್ಲಿ ಪ್ರಕಟಗೊಳ್ಳುವುದರಿಂದ ಎಲ್ಲರ ದೃಷ್ಟಿಕೋನಗಳನ್ನು ಗೌರವಿಸಿ. ಪ್ರತಿಯೊಬ್ಬರೂ ತಾವು ನಂಬುವುದನ್ನು ಆರಿಸಿಕೊಳ್ಳಲು ಸ್ವತಂತ್ರರು.
ಅಧ್ಯಾತ್ಮವೆಂದರೇನು? ಮನುಷ್ಯಸ್ವಭಾವವನ್ನು-ಸಮಗ್ರ ರಚನೆಯನ್ನು ಅಧ್ಯಾತ್ಮವೆನ್ನುತ್ತಾರೆ. ಮನುಷ್ಯ ಎಂಬುದರಲ್ಲಿ ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂ, ಜೀವ, ಆತ್ಮ - ಇವಿಷ್ಟೂ ಸೇರಿವೆ. ಈ ಸಮೂಹವೇ ಅಧ್ಯಾತ್ಮ. ಜೀವವು ಯಾವ ಯಾವ ಸಾಧನ ಉಪಕರಣಗಳಿಂದ ಲೋಕಸಂಪರ್ಕ ಮಾಡಿಕೊಳ್ಳುವುದೂ ವ್ಯವಹಾರ ನಡೆಸುವುದೂ ಸಾಧ್ಯವಾಗುತ್ತದೋ ಅವುಗಳೆಲ್ಲದರ ಒಟ್ಟು ಅರ್ಥವೇ ಅಧ್ಯಾತ್ಮ.
ಧರ್ಮವೆಂಬುದು ಒಂದು ಅನುಭವದ ವಿಷಯವೇ ಹೊರತು ಬರಿಯ ಸಿದ್ಧಾಂತ ಅಥವಾ ನಂಬಿಕೆಯಲ್ಲ ಎಂಬುದು ಭಾರತ ಚಿಂತನೆಯ ಒಂದು ಸತ್ಫಲ. ಬುಡದಿಂದ ತುದಿಗೇರುವ ಪುರುಷಪ್ರಯತ್ನವೇ ಧರ್ಮ. ಧರ್ಮ ಎರಡು ಪ್ರತ್ಯೇಕ ಫಲಗಳನ್ನು ದೊರಕಿಸಬಲ್ಲ ಸತ್ಕರ್ಮ: ಒಂದು ಇಷ್ಟಫಲ, ಇನ್ನೊಂದು ಹಿತಫಲ. ಧರ್ಮವು ಪ್ರಕೃತಿಯು ಹರಡುತ್ತಿರುವ ಮೋಹ-ಭ್ರಾಂತಿಗಳ ಬಲೆಗಳಿಂದ ನಮ್ಮನ್ನು ಕೊಂಚ ಹೊತ್ತಾದರೂ ಹೊರಕ್ಕೆ ಎಳೆದು, ನಮ್ಮ ಸ್ವಾರ್ಥ ಅಹಂಕಾರಗಳನ್ನು ತಗ್ಗಿಸಿ, ನಮ್ಮ ಮನಸ್ಸನ್ನು ದೇವರ ಕಡೆ ತಿರುಗಿಸುತ್ತದೆ. ನಮ್ಮ ಜೀವನವನ್ನು ಲೋಕಜೀವನಕ್ಕೆ ಅನುಗೊಳಿಸುತ್ತದೆ. ಈ ಜೀವಸಂಸ್ಕಾರವೇ ಧರ್ಮದಿಂದಾಗುವ ಹಿತಫಲ. ಪುಣ್ಯಕಾರ್ಯಗಳಿಂದ ಒಲಿದು ನಾವು ಬೇಡಿದ್ದನ್ನು ಕೊಡುವುದು ಇಷ್ಟಫಲ. ಧರ್ಮವು ನಾಲ್ಕು ಕರ್ತವ್ಯಗಳನ್ನು ಬೋಧಿಸುತ್ತದೆ: ಜೀವಪೋಷಣೆ; ಜೀವಶೋಧನೆ; ತತ್ತ್ವವಿಜ್ಞಾನ; ಲೋಕಮೈತ್ರಿ. ಇಂದ್ರಿಯಗಳಿಲ್ಲದೆ ಜೀವವಿಲ್ಲ; ಇಂದ್ರಿಯಗಳಿದ್ದು ನೆಮ್ಮದಿಯಿಲ್ಲ. ದರಿದ್ರನು ವಿರಕ್ತನಲ್ಲ; ಹಲ್ಲಿಲ್ಲದವನು ಪಥ್ಯಾನ್ನಸೇವಿಯಲ್ಲ; ಮೂಕ ಮೌನಿಯಲ್ಲ; ನಿಶ್ಯಕ್ತ ಸಾಧುಪುರುಷನಲ್ಲ. ಈ ನಾನಾ ನಿರಪರಾಧಿತ್ವಗಳು ವಾಸ್ತವವಾಗಿ ಗುಣಗಳಲ್ಲ; ಗುಣಲೋಪಗಳು. ಬಲವಿದ್ದು ಬಲಪ್ರಯೋಗ ಮಾಡದಿದ್ದರೆ ಅದು ಸಹನೆ. ದಂಡನಸಾಮರ್ಥ್ಯವುಳ್ಳವನು ದಂಡಿಸದೆ ಬಿಟ್ಟರೆ ಕ್ಷಮೆ. ಇಂದ್ರಿಯಗಳು ಪಟುವಾಗಿದ್ದು ದುಷ್ಟತನಕ್ಕೆ ಹೋಗದಿದ್ದರೆ ಅದು ಸದ್ಗುಣ. ಕರ್ಮದ ಗಾಣಕ್ಕೆ ಸಿಕ್ಕದಿರುವವರು ಯಾರೂ ಇಲ್ಲ. ಕೆಲವರು ಮೊದಲು; ಕೆಲವರು ಆಮೇಲೆ, ಅಷ್ಟೆ. ಧರ್ಮಮಾಡಿದವರು ಪಾರಾಗುತ್ತಾರೆ. ಧರ್ಮತತ್ವ ಮೂಲಭಾಗದಲ್ಲಿ ಎಲ್ಲರಿಗೂ ಒಂದೇ; ಪ್ರಯೋಗಭಾಗದಲ್ಲಿ ಬೇರೆಬೇರೆ. ಅವನವನ ಅಪೇಕ್ಷೆ ಯೋಗ್ಯತೆಗಳಿಗೆ ತಕ್ಕಂತೆ. ಹೊಟ್ಟೆಯ ಸ್ಥಿತಿಯನ್ನೂ ನಾಲಿಗೆಯ ಸ್ಥಿತಿಯನ್ನೂ ಅನುಸರಿಸಿ ಆಹಾರ; ಜೀವದ ಸ್ಥಿತಿಯನ್ನು ಅನುಸರಿಸಿ ಧರ್ಮ. ಜೀವದ ಅಶಕ್ತಿಯನ್ನೂ ಅದು ಅನುಸರಿಸಬೇಕಾಗುತ್ತದೆ. ಹಸಿವು ತಡೆಯಲಾರದವನಿಗೆ ಉಪವಾಸವನ್ನು ವಿಧಿಸಲಾದೀತೆ? ಜನರು ಬಗೆಬಗೆಯ ಬಯಕೆಗಳನ್ನಿರಿಸಿಕೊಂಡು ತಮ್ಮ ತಮ್ಮ ಇಷ್ಟಾರ್ಥಸಿದ್ಧಿಗಾಗಿ ನಾನಾ ದೇವತೆಗಳನ್ನು ಸ್ವೀಕರಿಸುತ್ತಾರೆ. ಅವರೆಲ್ಲರೂ ಭಗವನ್ಮಾರ್ಗದ ಯಾತ್ರಿಕರೇ. ಗಮ್ಯಸ್ಥಾನ ಒಂದು; ಅದಕ್ಕೆ ದಾರಿಗಳು ಅನೇಕ; ಯಾತ್ರಿಕನ ಅಭಿರುಚಿಗೂ ಕಾಲಿನ ಬಲಕ್ಕೂ ತಕ್ಕಂತೆ ಅವನು ದಾರಿಯನ್ನು ಗೊತ್ತುಮಾಡಿಕೊಳ್ಳತಕ್ಕದ್ದು" ಎಂಬುದಾಗಿ ಜೀವನಧರ್ಮಯೋಗದಲ್ಲಿ ಡಿ.ವಿ.ಜಿ.ಯವರು ವಿವರಿಸುತ್ತಾರೆ.
ಯಾರು ಯಾವ ವಿಚಾರವನ್ನೂ ಮಾಡದೆ ಒಂದು ಹೇಳಿಕೆಯನ್ನು ಅಲ್ಲಗಳೆಯುತ್ತಾರೋ ಅವರು ಎಲ್ಲಾ ರೀತಿಯ ಜ್ಞಾನವನ್ನು ಮುಚ್ಚುವ ಒಂದು ಮಾನಸಿಕ ತಡೆಗೋಡೆಯನ್ನು ನಿರ್ಮಿಸಿಕೊಳ್ಳುತ್ತಾರೆ. ಸುಖಾಸುಮ್ಮನೆ ಏಕಾಏಕಿ ಅಲ್ಲಗಳೆಯುವ ವ್ಯಕ್ತಿಯು ಅನ್ವೇಷಿಸುವುದಾದರೂ ಹೇಗೆ ಸಾಧ್ಯ? ಹೆಜ್ಜೆಗುರುತು ಮೂಡಿಸಲು ಹಂಬಲಿಸುವವರು ಎಂದಿಗೂ ಹಾರಬಾರದು. ಮನುಷ್ಯರು ನಿತ್ಯಕರ್ಮವನ್ನು ಸಂಪಾದಿಸುವುದಕ್ಕೆ ಮೂಲಕಾರಣ; ಅವರು ಹೆಜ್ಜೆಗುರುತನ್ನು ಮೂಡಿಸಲು ಬಯಸುವುದು. ಅದಕ್ಕಾಗಿ ತಮ್ಮ ಗುರುತನ್ನು ಮುಂದುವರಿಸುವ ದಾರಿಯ ಹುಡುಕಾಟದಲ್ಲಿ ತೊಡಗಿರುತ್ತಾರೆ. ಭಕ್ತರಾಗುವುದೆಂದರೆ ದೇವರೊಡನೆ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು. ನಮ್ಮ ಸಂಬಂಧವೇನಿದ್ದರೂ ಮಾನಸಿಕ ಅಥವಾ ಭಾವನಾತ್ಮಕ. ಸತತ, ನಿಯಮಿತ ಅಭ್ಯಾಸದಿಂದ ದೇವರೊಂದಿಗೆ ಮಾನಸಿಕ ಸಂಬಂಧ ಸಾಧಿಸಬಹುದು. ಉಣ್ಣುವ ಮೊದಲು ಅಡಿಗೆಯನ್ನು ದೇವರಿಗೆ ಸಮರ್ಪಿಸಿದಾಗ ಅದು ಪ್ರಸಾದವಾಗುತ್ತದೆ. ತಾನು ಸಂಪಾದಿಸಿದ್ದನ್ನು ತಾನು ಉಣ್ಣುತ್ತೇನೆ ಎಂಬ ಮನುಷ್ಯನನ್ನಾಗಿಸುವ ಭಾವಕ್ಕಿಂತ ದೇವರ ಪ್ರಸಾದವನ್ನು ಉಣ್ಣುತ್ತೇನೆ ಎಂಬ ಭಕ್ತಭಾವ ಪಾವನವಾಗಿರುತ್ತದೆ. ಅದು ನಮ್ಮನ್ನು ಪವಿತ್ರರನ್ನಾಗಿ, ಭಕ್ತರನ್ನಾಗಿ ಮಾಡುತ್ತದೆ.
ರಾಗಿ ಮತ್ತು ಸಾಸಿವೆಯ ಬೀಜಗಳು ರೂಪ ಮತ್ತು ಬಣ್ಣದಲ್ಲಿ ಒಂದೇ ಸಮಾನವಾಗಿರುವುವು. ಆದರೆ ಸಸ್ಯರೂಪದಲ್ಲಿ ಅದರ ರೂಪಾಂತರವಾಗತೊಡಗಿದಾಗ ಅದರ ಸಹಜ ಸಂಸ್ಕಾರಗಳು ಬೇರೆ ಬೇರೆಯಾದ ಕಾರಣ ಅವು ಒಂದು ಮತ್ತೊಂದರಿಂದ ಸಂಪೂರ್ಣವಾಗಿ ಭಿನ್ನಪ್ರಕಾರದ್ದಾಗಿರುವುದು. ಮನುಷ್ಯ ಮತ್ತು ಪಶುವಿನ ಬಿಂದುವೂ ಪ್ರಾಯಶಃ ಒಂದೇ ಸಮಾನವಾಗಿರುವುದು. ಆದರೆ ಗರ್ಭಾವಸ್ಥೆಯಲ್ಲಿ ಅದರ ಮುಂದಿನ ವೃದ್ಧಿಯಾಗತೊಡಗಿದಾಗ ಸಹಜ ಸಂಸ್ಕಾರಗಳ ಭಿನ್ನತೆಯ ಕಾರಣದಿಂದ ಅವು ಒಂದು ಮತ್ತೊಂದರಿಂದ ಸಂಪೂರ್ಣ ಭಿನ್ನಪ್ರಕಾರದ್ದಾಗಿರುವುದು. ಬಿಂದ್ವವಸ್ಥೆ ಮತ್ತು ಗರ್ಭಾವಸ್ಥೆಯಲ್ಲಿ ಪ್ರಾಪ್ತಮಾಡಿಕೊಂಡ ಸಂಸ್ಕಾರಗಳ ಅನುಸಾರವಾಗಿಯೇ ಜೀವದ (ಆತ್ಮದ) ಮನ, ಬುದ್ಧಿ, ಕರ್ಮ ಮತ್ತು ಶರೀರ ನಿರ್ಮಾಣವಾಗುವುದು. ಈ ಸಂಸ್ಕಾರ ಪ್ರಬಲವಾಗಿರುವುದು ಮತ್ತು ಮರಣಕಾಲದವರೆಗೂ ಮುಂದುವರಿಯುತ್ತದೆ. ಪ್ರಕೃತಿಯನ್ನು ಅರ್ಥೈಸುವುದೆಂದರೆ ಪ್ರಕೃತಿಯ ನಿಯಮಗಳಿಗೆ ಬದ್ಧರಾಗುವುದು.
ಕರ್ಮವೆಂದರೇನು? - ಪ್ರಾಣಿಗಳು ತಮ್ಮ ಪುನರ್ಜನ್ಮಕ್ಕೆ ಕಾರಣವಾಗುವಂತೆ ಮಾಡುವ ತಮ್ಮ ತಮ್ಮ ಶಕ್ತಿದ್ರವ್ಯಾದಿಗಳ ವಿನಿಯೋಗವೇ ಕರ್ಮ. ನಮ್ಮ ಲೋಕವ್ಯವಹಾರವು ಕೊಡುಗೆ-ಕೊಳುಗೆಗಳ ರೂಪವಾದದ್ದು. ಮನುಷ್ಯನು ಕ್ಷಣಕ್ಷಣವೂ ತನ್ನ ಒಂದಂಶವನ್ನು ಸುತ್ತಮುತ್ತಲಿನ ಜಗತ್ತಿಗೆ ವಿಸರ್ಜನೆಮಾಡುತ್ತಲೇ-ಬಿಟ್ಟುಕೊಡುತ್ತಲೇ ಇರುತ್ತಾನೆ. ಈ ಸಂತತವಾದ ವಿಸರ್ಜನಕ್ರಿಯೆಯೇ ಕರ್ಮ. ಅವನ ಅಂಶ ಲೋಕಸಮಸ್ತಕ್ಕೆ ಸೇರುವುದರಿಂದ ಅಲ್ಲಿ ಅದೆ ಪರಿಣಾಮ-ಪ್ರತಿಕ್ರಿಯೆಗಳುಂಟಾಗಿ, ಅವು ರೂಪಾಂತರದಲ್ಲಿ ಅವನಿಗೇ ಕರ್ಮಫಲವಾಗಿ ಹಿಂತಿರುಗಿಬರುತ್ತವೆ. ಅರ್ಥಾತ್ ಪುಣ್ಯಪಾಪಗಳು ಕರ್ಮ. ಎಲ್ಲಾ ಕರ್ಮಗಳ ಮೂಲವೂ ಮನಸ್ಸೇ. ಎಲ್ಲಾ ಕರ್ಮಗಳನ್ನೂ ಸಂಕಲ್ಪಿಸುವುದು ಮನಸ್ಸೇ. ಒಬ್ಬ ವ್ಯಕ್ತಿ ಎಷ್ಟು ಹೆಚ್ಚು ವಸ್ತುಗಳನ್ನು ಎಷ್ಟು ಹೆಚ್ಚು ಜನರಿಗೆ ಕೊಟ್ಟು ಎಷ್ಟು ಹೆಚ್ಚು ತೃಪ್ತಿ ಅಥವಾ ಸಂತೋಷಗಳನ್ನು ಉಂಟುಮಾಡಬಲ್ಲ? ಪ್ರತಿಯೊಬ್ಬನ ಸಾಮರ್ಥ್ಯಕ್ಕೂ ಮಿತಿಯಿದೆಯಲ್ಲವೇ?
ಆದ್ದರಿಂದ ಏನನ್ನು ಮಾಡಬಲ್ಲ, ಎಷ್ಟನ್ನು ಮಾಡಬಲ್ಲ ಎನ್ನುವುದಕ್ಕಿಂತ ಹೇಗೆ ಮಾಡಬಲ್ಲ, ಯಾವ ಭಾವದಿಂದ ಮಾಡಬಲ್ಲ ಎಂಬುದೇ ಮುಖ್ಯವಾಗುತ್ತದೆ. ಕರ್ಮಗಳು ಮನಸ್ಸಿನ ಮೇಲೆ ಮಾಡುವ ಪರಿಣಾಮಗಳನ್ನು ಅಂದರೆ ಅಪೇಕ್ಷಿತ ಸಂಸ್ಕಾರಗಳನ್ನು ಗಮನಿಸಿಯೇ ಕರ್ಮಗಳನ್ನು 'ಯಜ್ಞ' ಎಂದಿದ್ದಾರೆ. ಕರ್ಮವು ಜೀವನದ ಪ್ರಕ್ರಿಯೆಯೊಂದಿಗೆ ಕರಗುತ್ತದೆ. ಬದುಕೇ ಕರ್ಮವನ್ನು ಸುಡುವ ಸರಳ ವಿಧಾನ. ಕರ್ಮ ಒಂದು ಶಿಕ್ಷೆಯಲ್ಲ; ಇದು ಕೇವಲ ಮಾಹಿತಿ. ನೀವು ಆ ಮಾಹಿತಿಯನ್ನು ಹೇಗೆ ಸಾಗಿಸುತ್ತೀರಿ ಎಂಬುದರ ಮೇಲೆಯೇ ಎಲ್ಲವೂ ಅವಲಂಬಿತ. ಕರ್ಮವನ್ನು ಜನ್ಮಗಳ ಆಧಾರದಲ್ಲಿ ಚಿಂತಿಸಬೇಡಿ. ಈಗಿನ ಜೀವಂತ ಕ್ಷಣಗಳ ಆಧಾರದಲ್ಲಿ ಚಿಂತಿಸಿ