ಹೆಜ್ಜೆ ತಪ್ಪಿದರೆ ಗೆಜ್ಜೆಯ ನಾದವೂ ತಪ್ಪುತ್ತದೆ
ಪತಿ-ಪತ್ನಿಯರ ನಡುವೆ ಪ್ರೀತಿ, ವಿಶ್ವಾಸ ಮೂಡಲು ಒಂದು ಜೀವನ ಸಾಕಾಗುವುದಿಲ್ಲವೇನೋ! ಪ್ರೀತಿ ಮತ್ತು ವಿಶ್ವಾಸ ಜೊತೆಯಾಗಿಯೇ ಇರುತ್ತವೆ. ಪ್ರೀತಿ ಮೊದಲೋ ವಿಶ್ವಾಸ ಮೊದಲೋ ಎಂಬ ಪ್ರಶ್ನೆ ಬೀಜ ಮೊದಲೋ ವೃಕ್ಷ ಮೊದಲೋ ಎಂಬ ಪ್ರಶ್ನೆಯಷ್ಟೆ ಜಟಿಲ, ಕಠಿಣ ಮತ್ತು ಸಂಕೀರ್ಣ. ವಿಶ್ವಾಸ ಇದ್ದಲ್ಲಿ ಪ್ರೀತಿ ಇರುತ್ತದೆ, ಪ್ರೀತಿ ಇದ್ದಲ್ಲಿ ವಿಶ್ವಾಸ ಇರುತ್ತದೆ. ಒಂದರ ಕೊರತೆ ಇನ್ನೊಂದರ ಕೊರತೆಯೂ ಆಗಿರುತ್ತದೆ. ಪ್ರೀತಿಯ, ವಿಶ್ವಾಸದ ಕೊರತೆ ಉಂಟಾದಾಗ ಪತಿ-ಪತ್ನಿಯರ ನಡುವೆ ಆತ್ಮೀಯ ಒಡನಾಟ ಸಾಧ್ಯವಾಗುವುದಿಲ್ಲ. ವಿಶ್ವಾಸಾರ್ಹತೆಯ ಸಮಸ್ಯೆ ಎದುರಾಗುತ್ತದೆ. ಆಗ ದಾಂಪತ್ಯ ಎಂಬ ಕಟ್ಟಡ ಕುಸಿಯುತ್ತದೆ. ದಾಂಪತ್ಯದಲ್ಲಿ ವಿರಸ, ಬಿರುಕು ಉಂಟಾಗಲು ಬೇರೆ ಕಾರಣಗಳೂ ಇರುತ್ತವೆ. ಪರಸ್ಪರ ನಂಬಿಕೆ ಬಹಳ ಅಗತ್ಯ.
ಶೇಕ್ಸಪೀಯರನ “ಓಥೆಲೊ” ನಾಟಕ ದಾಂಪತ್ಯದ ಕಡುವೈರಿ ಸಂಶಯ, ಅಸೂಯೆ, ಅಪನಂಬಿಕೆ ಎಂಬ ಹುಳುವಿನ ಅನೇಕ ಸ್ಥರಗಳನ್ನು ಅವುಗಳ ಎಲ್ಲಾ ಸೂಕ್ಷ್ಮ ಚಹರೆಗಳೊಂದಿಗೆ ಪರಿಣಾಮಕಾರಿಯಾಗಿ ಅನಾವರಣ ಮಾಡುತ್ತದೆ.
ತನಗೆ ಇಷ್ಟವಾದ ಸ್ನಿಗ್ಧ ಸುಂದರಿ ಡೆಸ್ಡೆಮೊನಾಳನ್ನು ವಿವಾಹವಾಗಿ, ಅವಳ ಜೊತೆ ಕೆಲವು ವರ್ಷ ಸುಖಿ ಸಂಸಾರ ಸಾಗಿಸಿ, ಅವಳನ್ನು ಪ್ರೀತಿಯ ಹುಚ್ಚು ಹೊಳೆಯಲ್ಲಿ ತೇಲಾಡಿಸಿ, ಸ್ವರ್ಗಸುಖ ತಂದು ಅವಳ ಉಡಿಯಲ್ಲಿ ಹಾಕಿ ಹೂವಿನಂತೆ ಮೋಹಿಸಿ ಕೊನೆಗೆ ಹೂವಿಗಿಂತ ಮೃದುವಾದ ಅವಳ ಕತ್ತನ್ನು ಹಿಸುಕಿ ಓಥೆಲೊ ಏಕೆ ಕೊಲೆ ಮಾಡಿದ? ತಾನು ಪ್ರೀತಿಸಿದವರನ್ನೇ ಕ್ರೂರವಾಗಿ ಕೊಲೆ ಮಾಡುವ ಮನುಷ್ಯನಷ್ಟು ಕ್ರೂರ ಪ್ರಾಣಿ ಇನ್ನೊಂದು ಇದೆಯೆ?
ಓಥೆಲೊ ಇದ್ದಕ್ಕಿದ್ದಂತೆ ಡೆಸ್ಡೆಮೊನಾಳ ಚಾರಿತ್ಯವನ್ನು ಸಂದೇಹದಿಂದ ಕಾಣುವುದಿಲ್ಲ. ಇಯಾಗೊ ಓಥೆಲೊನ ಕಿವಿಯಲ್ಲಿ ಸಂದೇಹದ ವಿಷ ಹಾಕಿದ, ಅವನ ಮನಸ್ಸಿನಲ್ಲಿ ಸಂಶಯದ ಹುಳು ಹಾಕಿದ ಒಂದೇ ಕಾರಣಕ್ಕಾಗಿ ಓಥೆಲೊ ತಾನು ಗಾಢವಾಗಿ ಪ್ರೀತಿಸಿ ವಿವಾಹವಾದ ಡೆಸ್ಡೆಮೊನಾಳನ್ನು ಕೊಂದು ಹಾಕಲಿಲ್ಲ. ಇದರ ಹಿಂದೆ ಮನೋವೈಜ್ಞಾನಿಕ ಕಾರಣಗಳೂ ಇವೆ.
ಓಥೆಲೊನ ಮನಸ್ಸು ಮೊದಲಿನಿಂದಲೂ ಸದೃಢವಾಗಿರಲಿಲ್ಲ. ತನ್ನ ಕೈ ಹಿಡಿದವಳ ನಿಷ್ಠೆಯ ಬಗ್ಗೆ ಅವನ ಮನಸ್ಸಿನಲ್ಲಿ ಸಂದೇಹವಿದ್ದಂತೆ ತೋರುತ್ತದೆ. ಇಲ್ಲದಿದ್ದರೆ ಇಯಾಗೊ ಎಂಬ ದುರ್ಬುದ್ಧಿಯ ಮನುಷ್ಯ ಕ್ಯಾಸಿಯೊನ ಜೊತೆ ಡೆಸ್ಡೆಮೊನಾ ಅಕ್ರಮ ಸಂಬಂಧ ಹೊಂದಿದ್ದಾಳೆ, ಈ ಕಾರಣಕ್ಕಾಗಿಯೇ ಶಿಕ್ಷೆಗೆ ಗುರಿಯಾಗಿ ಹಿಂಬಡ್ತಿ ಹೊಂದಿದ ಕ್ಯಾಸಿಯೊನನ್ನು ಅವನ ಮೂಲ ಹುದ್ದೆಗೆ ನೇಮಕ ಮಾಡುವಂತೆ ಪತಿಯ ಮೊರೆ ಹೋಗಲಿದ್ದಾಳೆ ಎಂದು ಹೇಳಿದ ಕಾರಣಕ್ಕಾಗಿಯೇ ಮಲಗಿ ನಿದ್ರಿಸುತ್ತಿದ್ದ ಪತ್ನಿಯನ್ನು ಎಬ್ಬಿಸಿ, ಅವಳ ಕತ್ತು ಹಿಸುಕಿ ಓಥೆಲೊ ಸಾಯಿಸುತ್ತಾನೆ ಎಂದು ನಂಬುವುದು ಕಷ್ಟ. ಓಥೆಲೊನ ಮಾನಸಿಕ ಸ್ಥಿತಿಯ ಕುರಿತು ಯೋಚಿಸುವ ಅಗತ್ಯವಿದೆ. ಓಥೆಲೊ ನೀಗ್ರೋ ಆಗಿದ್ದು ಅವನ ಮುಖದ ಬಣ್ಣ ಕಪ್ಪಗಿರುತ್ತದೆ. ಅವನು ದೈಹಿಕವಾಗಿ ಬಲಿಷ್ಠನಾಗಿದ್ದರೂ ಆಕರ್ಷಕವಾದ ದೇಹ ಹೊಂದಿರುವುದಿಲ್ಲ. ತನ್ನ ಶಕ್ತಿ-ಸಾಮರ್ಥ್ಯದಿಂದ, ತನ್ನ ಸ್ವಾಮಿನಿಷ್ಠೆಯಿಂದ ಪದೋನ್ನತಿ ಹೊಂದಿ ಸೇನಾಧಿಪತಿಯಾಗಿದ್ದು ನಿಜವಿದ್ದರೂ ಡೆಸ್ಡೆಮೊನಾಳಂಥ ಅಪ್ಪಟ ಸುಂದರಿಯ ಪ್ರೀತಿಗೆ ಪಾತ್ರನಾಗುವ ವಿಶೇಷ ಗುಣಗಳು ತನ್ನಲ್ಲಿಲ್ಲ ಎಂಬ ಕೀಳರಿಮೆ ನಂತರದಲ್ಲಿ ಒಂದು ಮನೋರೋಗವಾಗಿ ಪರಿಣಮಿಸುತ್ತದೆ. ಈ ಕಾರಣಕ್ಕಾಗಿ ಓಥೆಲೊ ಒಂದು ರೀತಿಯ ಕೀಳರಿಮೆಯಿಂದ ಬಳಲುತ್ತಿದ್ದ. ತನ್ನ ಸಾಧನೆ, ತನ್ನ ಸ್ಥಾನಮಾನ, ತನ್ನ ಅಧಿಕಾರ ನೆಚ್ಚಿ ಡೆಸ್ಡೆಮೊನಾ ತನ್ನನ್ನು ವಿವಾಹವಾಗಿರಬಹುದು. ತನ್ನ ಕೌಟುಂಬಿಕ ಹಿನ್ನೆಲೆ, ತನ್ನ ಅನಾಗರಿಕ, ಅಸಾಂಸ್ಕೃತಿಕ ಹಿನ್ನೆಲೆ, ತನ್ನ ಬಣ್ಣ ಮುಂತಾದ ಕಾರಣಗಳಿಂದಾಗಿ ಡೆಸ್ಡೆಮೊನಾ ತನ್ನನ್ನು ಮನಸಾರೆ ಪ್ರೀತಿಸಿರಲಿಕ್ಕಿಲ್ಲ. ಡೆಸ್ಡೆಮೊನಾಳಂಥ ಅದ್ಭುತ ಸುಂದರಿ ತನ್ನಂಥ “ಮೂರ್”ನನ್ನು ಪ್ರೀತಿಸಲು ಸಾಧ್ಯವೇ ಇಲ್ಲ. ಅವಳು ತನ್ನ ಧರ್ಮದ, ತನ್ನ ಪ್ರದೇಶದ, ತನ್ನ ಬಣ್ಣದ ವ್ಯಕ್ತಿಯನ್ನು ಕದ್ದು ಮುಚ್ಚಿ ಪ್ರೀತಿಸಿರಬಹುದು ಎಂಬ ಕೊರಗು ಓಥೆಲೊನ ಮನಸ್ಸನ್ನು ಸಣ್ಣಗೆ ಕೊರೆಯುತ್ತಿರುತ್ತದೆ.
ರಾತ್ರಿ ಹೊತ್ತು ಡೆಸ್ಡೆಮೊನಾ ಹಾಸಿಗೆಯಲ್ಲಿ ಮಲಗಿ ಸುಖ ನಿದ್ರೆಗೆಯ್ಯುತ್ತಿದ್ದಾಗ ಕೈಯಲ್ಲಿ ಮೊಂಬತ್ತಿ ಹಿಡಿದು ಪ್ರವೇಶಿಸಿ ರಕ್ತ ಸುರಿಸದೆ, ಹಿಮಗಿಂತ ಬೆಳ್ಳಗಿನ ಅವಳ ದೇಹಕ್ಕೆ ಸಣ್ಣ ಗಾಯವನ್ನೂ ಮಾಡದೆ ಹೇಗೆ ಅವಳನ್ನು ಹತ್ಯೆಗೆಯ್ಯಬಹುದು ಎಂಬುದರ ಕುರಿತು ಯೋಚಿಸುತ್ತಾನೆ.
ನಿದ್ರೆಯಿಂದ ಎಚ್ಚರಗೊಂಡಾಗ ತನ್ನ ಪಲ್ಲಂಗದ ಹತ್ತಿರ ನಿಂತ ಪತಿಯನ್ನು ನೋಡಿ ಮುಗ್ಧತೆಯಿಂದ “ಮಲಗಲು ಬಂದಿರುವಿರಾ, ಪ್ರಭು?” ಎಂದು ಕೇಳುತ್ತಾಳೆ. ಆಗ ಅವನು “ರಾತ್ರಿ ಪ್ರಾರ್ಥನೆ ಸಲ್ಲಿಸಿದಿಯಾ?” ಎಂದು ಕೇಳುತ್ತಾನೆ. “ನೀನು ಎಸಗಿದ ಯಾವುದೇ ಅಪರಾಧದ ಬಗ್ಗೆ ದೇವರ ಮುಂದೆ ನಿವೇದಿಸಿಕೊಂಡಿರದಿದ್ದರೆ ಕೃಪೆಮಾಡಿ ಈಗಲೇ ನೇರವಾಗಿ ಮನವಿ ಮಾಡು” ಎಂದು ಓಥೆಲೊ ಹೇಳಿದಾಗ ಡೆಸ್ಡೆಮೊನಾಳಿಗೆ ಆಶ್ಚರ್ಯ, ಆಘಾತ ಏಕಕಾಲದಲ್ಲಿಯೇ ಆಗುತ್ತದೆ. “ಸರಿ ಈಗಲೇ ಪ್ರಾರ್ಥನೆ ಮಾಡು, ಚಿಕ್ಕದಿರಲಿ, ನಾನು ಇಲ್ಲೇ ಶತಪಥ ಹಾಕುತ್ತಾನೆ. ಸಾಯಲು ಸಿದ್ಧವಾಗಿರದ ನಿನ್ನ ಜೀವ ತೆಗೆಯಲಾರೆ, ನಿನ್ನ ಆತ್ಮದ ಹತ್ಯೆ ಮಾಡಲಾರೆ” ಎನ್ನುತ್ತಾನೆ. “ನಿಮ್ಮ ಬಗ್ಗೆ ಭಯವಿದೆ. ನಿಮ್ಮ ಕಣ್ಣು ತಿರುಗತೊಡಗಿದರೆ ನೀವು ಮೃತ್ಯುವಿನಂತೆ ಕಾಣುವಿರಿ. ನಾನು ಏಕೆ ಹೆದರಬೇಕು ಎಂದು ನನಗೆ ಗೊತ್ತಿಲ್ಲ. ಅಪರಾಧ ನನಗೊಂದು ತಿಳಿಯದು. ಆದರೂ ಭಯವಾಗುತ್ತಿದೆ” ಎಂದು ಡೆಸ್ಡೆಮೊನಾ ಹೇಳುತ್ತಾಳೆ. “ನಿನ್ನ ಪಾಪ ಕೃತ್ಯಗಳನ್ನು ನೆನೆದು ಪಶ್ಚಾತ್ತಾಪಪಡು” ಎಂದಾಗ “ನಿಮ್ಮನ್ನು ಪ್ರೀತಿಸಿದ್ದೇ ನಾನು ಎಸಗಿದ ಪಾಪ” ಎನ್ನುತ್ತಾಳೆ. “ಅದಕ್ಕಾಗಿಯೇ ನೀನು ಸಾಯಬೇಕು” ಎಂದು ಓಥೆಲೊ ಹೇಳಿದಾಗ ಡೆಸ್ಡೆಮೊನಾಳ ಎದೆ ಒಡೆಯುತ್ತದೆ.
“ಪ್ರೀತಿಸಿದ ಕಾರಣಕ್ಕಾಗಿ ಹತ್ಯೆಗೀಡಾಗಿ ಸಾವನ್ನಪ್ಪುವುದು ಅಸ್ವಾಭಾವಿಕ. ಕೆಳ ತುಟಿಯನ್ನು ಕಚ್ಚಿ ಹಿಡಿದಿರುವಿರಿ. ನಿಮ್ಮ ದೇಹ ರಕ್ತ ದಾಹದಿಂದ ನಡುಗುತ್ತಿದೆ. ಇವು ಅನಾಹುತದ ಮನ್ಸೂಚನೆಗಳು. ಆದರೂ ನೀವು ನನಗೆ ಹಾನಿ ಉಂಟು ಮಾಡಲಾರಿರಿ ಎಂಬ ಭರವಸೆ ಹೊಂದಿದ್ದೇನೆ” ಎಂದು ಡೆಸ್ಡೆಮೊನಾ ಹೇಳುತ್ತಾಳೆ.
ಆದರೆ ಅವಳನ್ನು ಹತ್ಯೆ ಮಾಡುವ ದೃಢ ನಿರ್ಧಾರದಿಂದ ಬಂದ ಓಥೆಲೊನ ಮೇಲೆ ಅವಳ ಪ್ರಾರ್ಥನೆ ಪರಿಣಾಮ ಬೀರುವುದಿಲ್ಲ. ಪತ್ನಿಯ ಮಾತು ಕೇಳುವ ತಾಳ್ಮೆಯೇ ಅವನಿಗಿರುವುದಿಲ್ಲ. ಅವಳು ತನ್ನ ಪತ್ನಿಯೇ ಅಲ್ಲ, ಅವಳು ಕೇವಲ ಆಪಾದಿತೆ, ತನಗೆ ದ್ರೋಹ ಎಸಗಿದ ಪಾತಕಿ ಎಂಬ ಭಾವ ಅವನ ಮನಸ್ಸನ್ನು ಸಂಪೂರ್ಣವಾಗಿ ಆವರಿಸಿರುತ್ತದೆ. ಆದರೆ ಕಾರಣ ತಿಳಿಸದೆ ಹತ್ಯೆ ಮಾಡುವುದು ನಾಗರಿಕ ನಡೆಯಲ್ಲ ಎಂದು ಡೆಸ್ಡೆಮೊನಾ ಸೂಕ್ಷ್ಮವಾಗಿ ಹೇಳುತ್ತಾಳೆ. “ನನ್ನ ತಂದೆ ನನ್ನ ತಾಯಿಗೆ ಉಡುಗೊರೆಯಾಗಿ ನೀಡಿದ ಕರವಸ್ತ್ರವನ್ನು ಅವಳು ನನಗೆ ಕೊಟ್ಟಿದ್ದಳು. ಅದನ್ನು ನಾನು ಪ್ರೀತಿಸುತ್ತಿದ್ದೆ. ಅದನ್ನು ನಿನಗೆ ಕಾಣಿಕೆಯನ್ನಾಗಿ ನೀಡಿದ್ದೆ. ನೀನು ಅದನ್ನು ಕ್ಯಾಸಿಯೊಗೆ ಕೊಡುಗೆಯಾಗಿ ನೀಡಿದೆ” ಎಂದು ಹೇಳುತ್ತಾನೆ. ಆಗ ಅವಳು “ನಾನು ಮುಗ್ಧೆ, ನಾನು ಅವನಿಗೆ ಯಾವ ಉಡುಗೊರೆಯನ್ನೂ ನೀಡಿಲ್ಲ, ಅವನನ್ನು ಕರೆದು ವಿಚಾರಿಸಿ” ಎನ್ನುತ್ತಾಳೆ. “ಆಗಲೇ ಅವನ ಕೊಲೆಯಾಗಿರುತ್ತದೆ. ಕ್ಯಾಸಿಯೊನನ್ನು ಹತ್ಯೆ ಮಾಡಲು ಇಯಾಗೊಗೆ ಆದೇಶಿಸಿದ್ದೇನೆ” ಎಂದು ಓಥೆಲೊ ಹೇಳಿದಾಗ “ನನ್ನ ಕಥೆ ಮುಗಿಯಿತು” ಎಂದು ಡೆಸ್ಡೆಮೊನಾ ರೋದಿಸುತ್ತಾಳೆ. ಸಂದೇಹದ ವಿಷ ಅವನ ಮಾನಸಿಕ ಸ್ಥಿರತೆಯನ್ನು ಧ್ವಂಸ ಮಾಡಿದ್ದರಿಂದ ಕ್ಯಾಸಿಯೊ ಹತ್ಯೆಗೀಡಾದ ಸುದ್ದಿ ತಿಳಿದು ರೋದಿಸುತ್ತಿದ್ದಾಳೆ ಎಂದುಕೊಂಡು ಅವಳ ಎದೆ ಸೀಳುವಂಥ ಬಿರುನುಡಿಗಳನ್ನು ಆಡುತ್ತಾನೆ. ತಾನು ಸಾಯಲು ಸಿದ್ಧಳಿಲ್ಲ, ತನ್ನನ್ನು ಗಡಿಪಾರು ಮಾಡಿ, ಕನಿಷ್ಠ ಒಂದು ರಾತ್ರಿ ಬದುಕಲು ಬಿಡಿ, ಒಂದು ಗಂಟೆಯಾದರೂ ಜೀವಸಹಿತ ಇರಲು ಬಿಡಿ, ಕೊನೆಯ ಪಕ್ಷ ಒಂದು ಪ್ರಾರ್ಥನೆಯಾದರೂ ಸಲ್ಲಿಸುವಷ್ಟು ಕಾಲಾವಕಾಶ ನೀಡಿ ಎಂದು ಕೇಳಿಕೊಂಡರೂ ಓಥೆಲೊನ ಮನಸ್ಸು ಕರಗುವುದಿಲ್ಲ. ಅವಳನ್ನು ಹತ್ಯೆ ಮಾಡುವವರೆಗೆ ಅವನ ಕ್ರೋಧ ನಿಯಂತ್ರಣಕ್ಕೆ ಬರುವುದಿಲ್ಲ. ಅವಳ ಸಖಿ, ಇಯಾಗೊನ ಪತ್ನಿ, ಎಮಿಲಿಯ ಓಥೆಲೊನಿಗೆ ನಿಜಸ್ಥಿತಿ ತಿಳಿಸುತ್ತಾಳೆ. ಇಯಾಗೊ ಸುಳ್ಳು ಹೇಳಿದ್ದಾನೆ ಎಂದು ಮನವರಿಕೆ ಮಾಡಿ ಕೊಡುತ್ತಾಳೆ. ಆದರೆ ಓಥೆಲೊನಿಗೆ ಜ್ಞಾನೋದಯ ಉಂಟಾದಾಗ ಕಾಲ ಮೀರಿರುತ್ತದೆ.
ಓಥೆಲೊನ ಕೀಳರಿಮೆ, ಅವನ ಮಾನಸಿಕ ದೌರ್ಬಲ್ಯ ಅವನ ದುರಂತಕ್ಕೆ ಕಾರಣವಾಗುತ್ತದೆ. ಅವನಿಗೆ ಬಿಳಿ ಚರ್ಮದ ಜನರ ನಿಷ್ಠೆಯ ಬಗ್ಗೆ ಆಳವಾದ ಅಪನಂಬಿಕೆ ಇರುತ್ತದೆ. ಕ್ಯಾಸಿಯೊನೊಂದಿಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಇಯಾಗೊ ಹೇಳಿದಾಗ ಓಥೆಲೊ ತಟ್ಟನೆ ನಂಬುತ್ತಾನೆ. ಪತ್ನಿಯ ಬಗ್ಗೆ ಆಳವಾದ ಅಪನಂಬಿಕೆ ಇದ್ದುದರಿಂದಲೇ ಇಯಾಗೊನ ಚಾಡಿ ಮಾತು ನಂಬಿ ಅವಳನ್ನು ದಾರುಣವಾಗಿ ಹತ್ಯೆ ಮಾಡುತ್ತಾನೆ.
The moor hath killed my mistress ಎಂದು ಎಮಿಲಿಯ ಅರಚುತ್ತಾಳೆ. Moor ಎಂದರೆ ಕಪ್ಪು ಚರ್ಮದ ವ್ಯಕ್ತಿ, ಅನಾಗರಿಕ ವ್ಯಕ್ತಿ ಎಂದೇ ಅರ್ಥ. ಇಂಥ ಮಾತುಗಳೇ ಓಥೆಲೊನ ಮಾನಸಿಕ ದುಸ್ಥಿತಿಗೆ ಕಾರಣವಾಗಿರುತ್ತವೆ. ನಾಟಕದ ಪ್ರಾರಂಭದಲ್ಲಿ ಡೆಸ್ಡೆಮೊನಾ ಓಥೆಲೊನನ್ನು ಮೋಹಿಸುತ್ತಿದ್ದಾಳೆ ಎಂಬ ಸುದ್ದಿ ತಿಳಿದಾಗ ಡೆಸ್ಡೆಮೊನಾಳ ತಂದೆ ಬ್ರಬ್ಯಾನ್ಷಿಗೆ “ನಿಮ್ಮ ರೂಪವತಿ ಮಗಳು… ಒಬ್ಬ ಸಾಮಾನ್ಯ ಕೂಲಿಕಾರನ ಜೊತೆ ರವಾನಿತಳಾಗಿದ್ದಾಳೆ, ಕಾಮಿ ನಿಗ್ರೊನ ಒರಟು ಅಪ್ಪುಗೆಗೆ” ಎಂದು ರಾಡರಿಗೊ ಹೇಳುತ್ತಾನೆ. ಇಲ್ಲೂ ಅವನ ಮುಖಬಣ್ಣದ, ಅವನ ಅನಾಗರಿಕತೆಯ ಪ್ರಸ್ತಾಪ ಬರುತ್ತದೆ. ಆಧುನಿಕತೆಯ ಭರಾಟೆಯಲ್ಲಿ, ಭಯಾನಕ ಪೈಪೋಟಿಯಲ್ಲಿ, ಹೇಳ ತೀರದ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳುವ ತರಾತುರಿ ಮತ್ತು ಹಪಾಹಪಿಯಲ್ಲಿ ಮನುಷ್ಯ ತೀವ್ರ ಸ್ವರೂಪದ ಮತ್ಸರ, ದ್ವೇಷ, ಅಪನಂಬಿಕೆ ಮತ್ತು ಸಂದೇಹದ ವಿಷಕಾರಿ ಭಾವನೆ, ಕಾಮನೆಗಳನ್ನು ತನ್ನ ಮೈ ಮನದಲ್ಲಿ ತುಂಬಿಕೊಂಡಿದ್ದಾನೆ. ಇಂಥ ಮನುಷ್ಯನಲ್ಲಿ ವಿವೇಕ, ಎಚ್ಚರ, ತಾಳ್ಮೆ ಇರಲು ಸಾಧ್ಯವೆ? ಸಿಟ್ಟಿನ ಕೈಯಲ್ಲಿ ಮನಸ್ಸು ಕೊಟ್ಟ ವ್ಯಕ್ತಿ ಸರಿಯಾದ ಕೃತ್ಯ ಎಸಗಲು ಸಾಧ್ಯವಿಲ್ಲ. ವಿವೇಕ ಹೊಂದಿರುವ, ಯೋಚಿಸಿ ಆಲೋಚಿಸಿ ಕೆಲಸ ಮಾಡುವ, ತಾಳ್ಮೆ, ಸಹನೆಯಿಂದ ಎದುರಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನುಷ್ಯ ಮಾತ್ರ ನೆಮ್ಮದಿಯ, ಶಾಂತಿಯುತ ಜೀವನ ನಡೆಸಲು ಸಾಧ್ಯವಿದೆ.