ಹೆದ್ದಾರಿ ದೇಶದ ಅಭಿವೃದ್ಧಿಗೆ ರಾಜಮಾರ್ಗ
ಬೆಳಗಾವಿ: ದೇಶದಾದ್ಯಂತ ಗ್ರೀನ್ ಕಾರಿಡಾರ್ ಹೆದ್ದಾರಿ ಅಭಿವೃದ್ಧಿಪಡಿಸುವುದು ಕೇಂದ್ರ ಸರಕಾರದ ಆದ್ಯತೆಯಾಗಿದೆ. ದೇಶದ ಪ್ರಮುಖ ನಗರಗಳ ಮಧ್ಯೆ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡು ಪ್ರಯಾಣದ ಅವಧಿ ಕಡಿಮೆಗೊಳಿಸಿ ಸುಗಮ, ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಬೆಳಗಾವಿ ಜಿಲ್ಲೆಯ ೧೬೨೨ ಕೋಟಿ ವೆಚ್ಚದ ಹೊನಗಾ-ಝಾಡಶಹಾಪುರ ಚತುಷ್ಪಥ ರಿಂಗ್ ರಸ್ತೆ, ೯೪೧ ಕೋಟಿ ವೆಚ್ಚದ ಚಿಕ್ಕೋಡಿ ಬೈಪಾಸ್‌ನಿಂದ-ಗೋಟೂರವರೆಗಿನ ಚತುಷ್ಪಥ ಹಾಗೂ ಶಿರಗುಪ್ಪಿಯಿಂದ ಅಂಕಲಿವರೆಗಿನ ೮೮೭ ಕೋಟಿ ವೆಚ್ಚದ ರಸ್ತೆ ಅಗಲೀಕರಣ ಸೇರಿದಂತೆ ಒಟ್ಟಾರೆ ೧೩ ಸಾವಿರ ಕೋಟಿ ಮೌಲ್ಯದ ೬೮೦ ಕಿ.ಮೀ. ಉದ್ದದ ೩೬ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರ ಸಮರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಅನೇಕ ವರ್ಷಗಳಿಂದ ಬೆಳಗಾವಿ ರಿಂಗ್ ರಸ್ತೆ ಸಮಸ್ಯೆ ಚರ್ಚೆಯಾಗಿತ್ತು. ಸುರೇಶ್ ಅಂಗಡಿ ಅವರು ಹಾಗೂ ಎಲ್ಲ ಶಾಸಕರು ಪ್ರಸ್ತಾಪಿಸಿದ್ದರು. ಇದೀಗ ಬೆಳಗಾವಿ ರಿಂಗ್ ರಸ್ತೆಗೆ ಕಾಲ ಕೂಡಿ ಬಂದಿದೆ. ರಾಜ್ಯದಲ್ಲಿ ೮೨೦೦ ಕಿ.ಮೀ ರಾ.ಹೆ.ಇದೆ. ರಾಜ್ಯದಲ್ಲಿ ೩ ಲಕ್ಷ ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಕೈಗೊಳ್ಳುವ ಗುರಿ ಇತ್ತು. ಇಂದು ಬಹುತೇಕ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ರಸ್ತೆಗಳು ಅಭಿವೃದ್ಧಿಗೆ ಮಾರ್ಗಗಳಾಗಿವೆ. ಬೆಳಗಾವಿ ಬೈಪಾಸ್ ೩೪೦೦ ಕೋಟಿ ವೆಚ್ಚದ ಈ ಕಾಮಗಾರಿಯಿಂದ ಬೆಳಗಾವಿ-ಗೋವಾ ರಾಜ್ಯದ ನಡುವಿನ ಪ್ತಯಾಣದ ಅವಧಿಯನ್ನು ಕಡಿತಗೊಳಿಸಲಿದೆ ಎಂದು ತಿಳಿಸಿದರು.