ಹೆಸರು ಹೇಳದಿದ್ದರೆ ಶಿರಚ್ಛೇಧ
ನನ್ನ ಕಥೆ ಹೇಳುತ್ತೇನೆ. ಕಥೆ ಕೊನೆಯಲ್ಲಿ ನಿನಗೆ ಕೇಳುವ ಪ್ರಶ್ನೆಗೆ ಉತ್ತರಿಸದಿದ್ದರೆ ನಿನ್ನ ತಲೆ ನೂರು ಹೋಳಾಗುತ್ತದೆ. ಇದೋ ನಿನ್ನ ಟಾಸ್ಕ್ ಕಥೆ ಹೇಳುತ್ತೇನೆ ಕೇಳು ಎಂದು ಲಾದುಂಚಿ ರಾಜನಿಗೆ ಬೇತಾಳದ ಕಥೆಯಂತೆ ಎಲ್ಲವೂ ಎಕ್ಸಪ್ಲೇನ್ ಮಾಡ ತೊಡಗಿದ ತಿಗಡೇಸಿ.
ಕಥೆ ಹೀಗಿದೆ….
ಕಿವುಡನುಮಿ ಮತ್ತು ಮಟಮಾರಿ ರಂಗಿ ಇಬ್ಬರೂ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಯಾವತ್ತೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಇದ್ದರೆ ಹೀಗಿರಬೇಕು ದೋಸ್ತಿ ಎಂದು ಊರ ಜನರು ಮಾತಾಡಿಕೊಳ್ಳುತ್ತಿದ್ದರು. ತಿರುಕೇಸಿಯು ಇವರದ್ದೇ ಗೆಳೆತನದ ಕಥೆಯಾಧರಿಸಿ ಶಾರ್ಟ್ ಮೂವಿ ಮಾಡಬೇಕು ಅಂದಿದ್ದ. ಒಬ್ಬರಿಗೆ ಏನಾದರೂ ಅಂದರೆ ಇನ್ನೊಬ್ಬರು ಕಾಲು ಕೆದರಿಕೊಂಡು ಜಗಳಕ್ಕೆ ನಿಲ್ಲುತ್ತಿದ್ದರು. ಅವರ ಪೋಷಕರು… ಇಷ್ಟೊಂದು ದೋಸ್ತಿ ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದ್ದರೂ ಇವರು ಕೇಳುತ್ತಿರಲಿಲ್ಲ. ಇಬ್ಬರೂ ಓದು ಮುಗಿಸಿದರು. ಕಿವುಡನುಮಿ ತನ್ನ ತಾಯಿಯ ತಮ್ಮ ಡಿಂಗಿಚಿಕ್ಕಿಯನ್ನು ಮದುವೆಯಾದಳು. ಮಟಮಾರಿ ರಂಗಿಯನ್ನು ಇನ್ಯಾರಿಗೋ ಮದುವೆ ಮಾಡಿ ಕೊಡಲಾಯಿತು. ಇಬ್ಬರೂ ತಮ್ಮ ಗಂಡಂದಿರ ಜತೆ ಇದ್ದರು. ಕಾಲ ಕ್ರಮೇಣ ಇಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷ ಸೇರಿಕೊಂಡರು. ಒಂದು ಸಾರಿ ಕಿವುಡನುಮಿ ಪಕ್ಷ ಅಧಿಕಾರಕ್ಕೆ ಬಂದು ಆಕೆ ಮಂತ್ರಿಯಾದಳು. ಇನ್ನೊಂದು ಬಾರಿ ಮಟಮಾರಿ ರಂಗಿ ಪಕ್ಷ ಆಡಳಿತದ ಚುಕ್ಕಾಣೆ ಹಿಡಿದಾಗ ಆಕೆಯೂ ಮಂತ್ರಿಯಾದಳು. ಆಗ ಜಿಗ್ರಿ ದೋಸ್ತಗಳಾಗಿದ್ದ ಅವರು ಈಗ ಬದ್ದ ಜಗಳಗಂಟರಾಗಿದ್ದಾರೆ. ಅವರಿಬ್ಬರ ಹೆಸರು ಹೇಳು ಎಂದು ಗಂಟು ಬಿದ್ದಾಗ ಲಾದುಂಚಿ ರಾಜ ಮೂರ್ಛೆ ಹೋಗಿ ಒಂದು ತಾಸು ಆಗಿತ್ತು.