ಹೇಗಿರಲಿದೆ ಮೋದಿ ಬಟಾಲಿಯನ್ ನಡೆ?
ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಮಾಡಿರುವ ಕಟು ಟೀಕೆಯನ್ನು ಬಿಜೆಪಿ ಹೇಗೆ ಎದುರಿಸಲಿದೆ? ಸೋಮವಾರದಿಂದ (ಫೆ. ೧೯) ಆರಂಭವಾಗುವ ಬಜೆಟ್ ಚರ್ಚೆ ಈ ಪ್ರಶ್ನೆಯಿಂದಾಗಿಯೇ ಆಸಕ್ತಿ ಕೆರಳಿಸಿದೆ.
ವೇದಿಕೆಯಿಂದ ಕೇಳಿ ಬಂದ ರಾಜಕೀಯ ಟೀಕೆಯಲ್ಲ ಇದು. ಬಜೆಟ್ ಪುಸ್ತಕದ ಮೂಲಕ ವಿಧಾನಸಭೆಯ ದಾಖಲೆ ಸೇರಿರುವ ದಾಖಲೆ'. ಆದ್ದರಿಂದಲೇ ಬಿಜೆಪಿಗೆ ಸವಾಲು. ಮೋದಿ ಟೀಕಿಸುವ ಮೂಲಕ ಸಿಎಂ ಸಿದ್ದರಾಮಯ್ಯ ರಾಜಕೀಯ ಚರ್ಚೆಯೊಂದಕ್ಕೆ ಜಾಣ್ಮೆಯ ಮುನ್ನುಡಿ ಬರೆದಿದ್ದಾರೆ. ರಾಜ್ಯ- ಕೇಂದ್ರಗಳ ಸಂಘರ್ಷ ಕೇವಲ ವಿಷಯಾಧಾರಿತವಲ್ಲ ಎಂಬುದನ್ನು ಪರೋಕ್ಷವಾಗಿ ಧ್ವನಿಸಿದ್ದಾರೆ. ಅನುದಾನ ತಾರತಮ್ಯ ಮತ್ತಿತರ ವಿಷಯಗಳಲ್ಲಿ ಪಕ್ಷ ರಾಜಕಾರಣದ ಛಾಯೆ ಇದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಬಿಜೆಪಿ ಕೇವಲ ಸಿಟ್ಟಿನಿಂದ ಪ್ರತಿಕ್ರಿಯಿಸಲಿದೆಯೋ? ಅಥವಾ ಸಿಎಂ ಟೀಕೆಗೆ ಸೂಕ್ತ ಉತ್ತರವನ್ನು ದಾಖಲಿಸುತ್ತದೋ? ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿ ಮೂಡಿರುವ ಕುತೂಹಲ. ಬಿಜೆಪಿಯೊಂದೇ ಅಲ್ಲ, ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೂ ಒಂದು ರೀತಿ ಸವಾಲೇ. ಏಕೆಂದರೆ ಮೋದಿ ಟೀಕೆಯನ್ನು ಅವರು ಸಮರ್ಥನೆ ಮಾಡಿಕೊಳ್ಳಬೇಕಾಗಿದೆ. ಜುಲೈ ಬಜೆಟ್‌ನಲ್ಲಿ ಸಿದ್ದರಾಮಯ್ಯ ಮಾಡಿದ ಟೀಕೆಯನ್ನು ಬಿಜೆಪಿ ಸದನದ ಒಳ- ಹೊರಗೆ ಸಮರ್ಥವಾಗಿ ಎದುರಿಸಿರಲಿಲ್ಲ. ಈಗ ವಿಪಕ್ಷ ನಾಯಕ, ಉಪ ನಾಯಕ, ಪಕ್ಷದ ಅಧ್ಯಕ್ಷ, ನಿಕಟಪೂರ್ವ ಮುಖ್ಯಮಂತ್ರಿ, ಭಿನ್ನಮತೀಯರಾದರೂ ಮೋದಿಯ ಪ್ರಖರ ಅಭಿಮಾನಿ ಈ ಎಲ್ಲರನ್ನೂ ಮೊದಲುಗೊಂಡು ಪ್ರಮುಖರು ಸದನದ ಒಳಗಿದ್ದಾರೆ. ಹೀಗಾಗಿ ರಾಜಕೀಯ ಕುತೂಹಲಿಗಳ ಕಣ್ಣು ನೆಟ್ಟಿದೆ. ಬಿಜೆಪಿ ಹೈಕಮಾಂಡ್ ಕೂಡ ಸದನದ ಒಳಗಿನ ಕೇಸರಿ ಪಡೆ ನಿರ್ವಹಣೆಯನ್ನು ಗಮನಿಸುತ್ತಿದೆ. ಚುನಾವಣೆ ಕಾಲಘಟ್ಟದ
ಮೋದಿ ಮಿತ್ರ' ಎಚ್.ಡಿ.ಕುಮಾರಸ್ವಾಮಿ ಆಡುವ ಮಾತುಗಳನ್ನೂ ಎದಿರು ನೋಡುತ್ತಿದೆ.
ಒಟ್ಟಿನಲ್ಲಿ ಆಯವ್ಯಯ ಚರ್ಚೆ ಈ ಬಾರಿ ಹಿಂದೆಂದೂ ಇಲ್ಲದಷ್ಟು ರಾಜಕೀಯ ಆಯಾಮದಿಂದ ಕೂಡಿರಲಿದೆ. ಪ್ರಧಾನಿ ಮೋದಿ ಕೇಂದ್ರಿತವಾಗಿಯೇ ಕೊನೆಗೊಂಡರೂ ಅಚ್ಚರಿಯಿಲ್ಲ.
ಸದನದಲ್ಲಿ ಪಂಥಾಹ್ವಾನ
ವೇದಿಕೆಗಳಲ್ಲಿ ಮೋದಿ ಹೆಸರು ಹೇಳಿ ಟೀಕೆ ಮಾಡುವ ಕೆಲವೇ ಕೆಲವು ನಾಯಕರ ಪೈಕಿ ಸಿದ್ದರಾಮಯ್ಯ ಪ್ರಮುಖರು. ಸಾರ್ವಜನಿಕ ವೇದಿಕೆಗಳಲ್ಲಿ `ಏನ್ರೀ ಮೋದಿಯವರೇ' ಎಂದು ಸಿದ್ದರಾಮಯ್ಯ ಕೇಳುವುದು ನಾಡಿಗೆ ತಿಳಿದ ವಿಷಯ. ಸದನದ ಒಳಗೂ ಮೋದಿ ಹೆಸರು ಹೇಳಿ ಅವರು ಟೀಕಿಸಿದ್ದಿದೆ. ಆದರೆ ಆಗೆಲ್ಲ ಮೋದಿ ಕೇಂದ್ರಿತ ಚರ್ಚೆ ಆಗಿರಲಿಲ್ಲ. ಈ ಬಾರಿ ಸಿಎಂ ಬಜೆಟ್‌ನಲ್ಲಿಯೇ ಟೀಕಿಸಿದ್ದಾರೆ. ವಿಧಾನಸಭೆ ಮತ್ತು ಪರಿಷತ್ತು ಎರಡೂ ಕಡೆ ಮೋದಿ ಕೇಂದ್ರಿತ ಚರ್ಚೆಗೆ ಪಂಥಾಹ್ವಾನ ನೀಡಿದ್ದಾರೆ !