For the best experience, open
https://m.samyuktakarnataka.in
on your mobile browser.

ಹೊರಟ್ಟಿಗೆ ಲಿಮ್ಕಾ ದಾಖಲೆ ಗರಿ

03:12 AM Jan 25, 2024 IST | Samyukta Karnataka
ಹೊರಟ್ಟಿಗೆ ಲಿಮ್ಕಾ ದಾಖಲೆ ಗರಿ

ಹುಬ್ಬಳ್ಳಿ: ಸಭಾಪತಿ ಬಸವರಾಜ ಹೊರಟ್ಟಿ ಅವರ ಮೂಡಿಗೆ ಲಿಮ್ಕಾ ದಾಖಲೆಯ ಗರಿ ಸೇರ್ಪಡೆಯಾಗಿದೆ. ವಿಧಾನ ಪರಿಷತ್ತಿನಲ್ಲಿ ಸತತ ೪೩ ವರ್ಷಗಳಿಂದ ಸೋಲಿಲ್ಲದ ಸರದಾರರಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿದ್ದಾರೆ. ೧೯೭೦ರಿಂದ ೨೦೨೨ರವರೆಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಹೊರಟ್ಟಿ, ಒಟ್ಟು ಎಂಟು ಚುನಾವಣೆಗಳಲ್ಲಿ ಸ್ಪರ್ಧಿಸಿ ಅಜೇಯರಾಗಿದ್ದಾರೆ.
೧೯೭೦ರಲ್ಲಿ ಪಕ್ಷೇತರರಾಗಿ ಚುನಾಯಿತರಾಗಿದ್ದ ಅವರು, ೧೯೮೩ರಿಂದ ಕಳೆದ ಚುನಾವಣೆಯವರೆಗೆ ಜನತಾ ಪಕ್ಷ, ಜನತಾ ದಳ (ಎಸ್) ಸೇರಿದಂತೆ ಜನತಾ ಪರಿವಾರದಲ್ಲಿದ್ದ ಅವರು, ೨೦೨೨ರ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿ ಆಯ್ಕೆಗೊಂಡಿದ್ದಾರೆ. ಮೇಲ್ಮನೆಯ ಸಭಾಪತಿ ಹೊರಟ್ಟಿಯವರ ಸತತ ಎಂಟು ಗೆಲವುಗಳು ದೇಶದ ಚುನಾಯಿತ ವ್ಯವಸ್ಥೆಯಲ್ಲಿ ದಾಖಲೆ.
ಲೋಕಸಭೆ ಅಥವಾ ರಾಜ್ಯಸಭೆ, ಇಲ್ಲವೇ ಯಾವುದೇ ರಾಜ್ಯದ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ೪೩ ವರ್ಷ ೨೦೧ ದಿನಗಳಿಂದ ಸೋಲಿಲ್ಲದೇ ಸದಸ್ಯರಾಗಿರುವ ಭಾರತದ ಏಕೈಕ ರಾಜಕಾರಣಿ ಹೊರಟ್ಟಿ. ಇಷ್ಟೊಂದು ಸುದೀರ್ಘ ಚುನಾವಣಾ ರಾಜಕಾರಣವನ್ನು ಮತ್ತೊಬ್ಬರು ದೇಶದ ಇತಿಹಾಸದಲ್ಲಿ ಮಾಡಿಲ್ಲ.
ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ಮಾಡುವ ವಿಶ್ವ ಮಟ್ಟದ ದಾಖಲೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕ ಪ್ರತಿ ವರ್ಷ ದಾಖಲಿಸಿ ಬಿಡುಗಡೆ ಮಾಡುತ್ತದೆ. ಪ್ರಸಕ್ತ ವರ್ಷದ ಪುಸ್ತಕವನ್ನು ಈಗ ಸಂಸ್ಥೆ ಬಿಡುಗಡೆ ಮಾಡಿದೆ.
ಬಸವರಾಜ ಹೊರಟ್ಟಿ ಅವರ ಈ ಸಾಧನೆ ಈಗಾಗಲೇ ಲಂಡನ್ನಿನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿದೆ (೨೦೨೨). ಸಭಾಪತಿಗಳ ಈ ದೀರ್ಘ ಯಾನದ ಅಂಕಿಸಂಖ್ಯೆಗಳು ಭಾರತದ ಚುನಾವಣಾ ಆಯೋಗದಲ್ಲಿ ದಾಖಲಿಕರಣಗೊಂಡು ಗೆಜೆಟ್‌ನಲ್ಲಿ ಪ್ರಕಟವಾಗಿವೆ.
ಸಿಕ್ಕೀಂ ಮಾಜಿ ಮುಖ್ಯಮಂತ್ರಿ ಪವನ ಕುಮಾರ್ ಸಿಎಂ ಆಗಿ ೨೪ ವರ್ಷ ೧೬೫ ದಿನ ಆಡಳಿತ ನಡೆಸಿ, ಪಶ್ಚಿಮ ಬಂಗಾಳದ ಮಾಜಿ ಸಿಎಂ ಜ್ಯೋತಿ ಬಸು ಅವರ ೨೩ ವರ್ಷ ೧೩೭ ದಿನಗಳ ದಾಖಲೆಯನ್ನು ಅಳಸಿರುವುದನ್ನು ಕೂಡ ಈ ಬಾರಿಯ ಲಿಮ್ಕಾ ದಾಖಲೆ ಪುಸ್ತಕದಲ್ಲಿ ನಮೂದಿಸಲಾಗಿದೆ.