೨೦ ಭಾರತೀಯರಿಂದ ರಕ್ಷಣೆಗೆ ಮನವಿ
ನವದೆಹಲಿ: ರಷ್ಯಾದಲ್ಲಿ ಸಿಲುಕಿಕೊಂಡ ಕನಿಷ್ಟ ೨೦ ಭಾರತೀಯರು ಭಾರತದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತ ಈಗ ರಷ್ಯಾ ಅಧಿಕಾರಿಗಳನ್ನು ಸಂಪರ್ಕಿಸಿ ಈ ಭಾರತೀ ಯರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದೆ ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಭಾರತೀಯರಲ್ಲಿ ಕೆಲವರು ಉಕ್ರೇನ್ ನೊಂದಿಗೆ ಯುದ್ಧದಲ್ಲಿ ತೊಡಗಿರುವ ರಷ್ಯಾದಲ್ಲಿ ಇಕ್ಕಟ್ಟಿಗೆ ಸಿಲುಕಿರುವ ಸಂಗತಿಯನ್ನು ಕೇಂದ್ರ ಸರ್ಕಾರ ಫೆ.೨೩ರಂದು ಒಪ್ಪಿಕೊಂಡಿತ್ತು. ರಷ್ಯಾ ಮಿಲಿಟರಿಯಲ್ಲಿ ಸಹಾಯಕರ ಹುದ್ದೆ ನೀಡುವ ಭರವಸೆಯೊಂದಿಗೆ ಕರೆದೊಯ್ದು ಉಕ್ರೇನ್ ವಿರುದ್ಧ ಯುದ್ಧ ತೊಡಗಿಸಿಕೊಳ್ಳುವ ಮೂಲಕ ಭಾರತೀಯರಿಗೆ ಮೋಸ ಮಾಡಲಾಗಿದೆ.
ಈ ರೀತಿ ವಂಚನೆಗೊಳಗಾದವರಲ್ಲಿ ಜಮ್ಮು-ಕಾಶ್ಮೀರದ ಅಜಾದ್ ಯುಸುಫ್ ಕುಮಾರ್ ಕೂಡಾ ಸೇರಿದ್ದು ಈತನ ಆಗಮನವನ್ನು ಹೆತ್ತವರು ನಿರೀಕ್ಷಿಸುತ್ತಿದ್ದಾರೆ. ೩೧ ವರ್ಷದ ಅಜಾದ್‌ನನ್ನು ಈಗ ಯುದ್ಧದಲ್ಲಿ ತೊಡಗಿಸಿಕೊಳ್ಳಲಾಗಿದೆ. ಹೀಗಾಗಿ ತನ್ನನ್ನು ಸ್ವದೇಶಕ್ಕೆ ಕರೆತರುವಲ್ಲಿ ಭಾರತದ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಆತ ಮನವಿ ಮಾಡಿದ್ದಾನೆ.