ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

೫,೮,೯, ೧೧ ಬೋರ್ಡ್ ಪರೀಕ್ಷೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

12:05 AM Mar 19, 2024 IST | Samyukta Karnataka

ಬೆಂಗಳೂರು: ೫, ೮, ೯ ಮತ್ತು ೧೧ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಸುತ್ತೋಲೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ೫, ೮, ೯ ಮತ್ತು ೧೧ನೇ ತರಗತಿಗಳಿಗೆ ಬೋರ್ಡ್ ಮಟ್ಟದ ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ಏಕಸದಸ್ಯ ಪೀಠ ರದ್ದುಪಡಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ರಾಜೇಶ್ ಕೆ.ರೈ ಅವರಿದ್ದ ನ್ಯಾಯಪೀಠ, ತೀರ್ಪನ್ನು ಕಾಯ್ದಿರಿಸಿ ಮುಂದಿನ ಕೆಲ ದಿನಗಳಲ್ಲಿ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ರಾಜ್ಯ ಪಠ್ಯಕ್ರಮ ಅಳವಡಿಸಿರುವ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ವ್ಯವಸ್ಥೆ ಬೇಕಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆಗೆ ಮುಂದಾಗಿದೆ.
ಅಲ್ಲದೇ, ಪರೀಕ್ಷೆಗಳು ತಮಾಷೆಯಲ್ಲ. ಮಕ್ಕಳು ಹಲವು ದಿನಗಳಿಂದ ಸಿದ್ದತೆ ಮಾಡಿಕೊಂಡಿರುತ್ತಾರೆ. ಆದರೆ, ಪರೀಕ್ಷಾ ದಿನಾಂಕಗಳನ್ನು ಮತ್ತೆ ಮತ್ತೆ ಬದಲಾವಣೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತರದ ಗೊಂದಲಗಳಿಗೆ ಕಾರಣವಾಗುತ್ತಿದೆ ಎಂದರು.
ರಾಜ್ಯ ಶಿಕ್ಷಣ ಇಲಾಖೆಗೆ ಆರ್‌ಟಿಐ ಕಾಯಿದೆಯಡಿ ಪರೀಕ್ಷೆಗಳನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಳೆದ ವರ್ಷವೂ ಆರ್‌ಟಿಐ ಕಾಯಿದೆಯಡಿ ಸುತ್ತೋಲೆ ಹೊರಡಿಸಿ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಇಲಾಖೆ ಸಮವರ್ತಿ ಪಟ್ಟಿಗೆ
ಸೇರಿದ್ದು, ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ ಎಂದಿತ್ತು ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲರು, ರಾಜ್ಯ ಸರ್ಕಾರವು ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಕ್ಕೆ ಮುಂದಾಗಿರುವುದು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಗೆ ತದ್ವಿರುದ್ಧವಾಗಿದೆ. ಈ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಕಾನೂನುಬಾಹಿರ ಎಂದು ವಿವರಿಸಿದ್ದರು. ವಾದ - ಪ್ರತಿವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿದೆ.

Next Article