For the best experience, open
https://m.samyuktakarnataka.in
on your mobile browser.

೬ನೇ ಶತಮಾನದ ರಾಮನ ವಿಗ್ರಹ ಪತ್ತೆ

12:43 AM Feb 26, 2024 IST | Samyukta Karnataka
೬ನೇ ಶತಮಾನದ ರಾಮನ ವಿಗ್ರಹ ಪತ್ತೆ

ಬೆಳಗಾವಿ(ಖಾನಾಪುರ): ತಾಲೂಕಿನ ಬೇಕವಾಡ ಗ್ರಾಮದ ಹಿಂದು ರುದ್ರಭೂಮಿಯಲ್ಲಿ ಕ್ರಿ.ಶ. ೬ನೇ ಶತಮಾನದಷ್ಟು ಹಳೆಯದಾಯ ಶ್ರೀ ರಾಮನ ವಿಗ್ರಹವನ್ನು ಪುರಾತತ್ವ ಸಂಶೋಧಕ ಡಾ. ಬಾಹುಬಲಿ ಹಂದೂರ ಪತ್ತೆ ಹಚ್ಚಿದ್ದಾರೆ. ತಾಲೂಕು ಕೇಂದ್ರದಿಂದ ದಕ್ಷಿಣ ದಿಕ್ಕಿಗೆ ೧೫ ಕಿಮೀ ದೂರದಲ್ಲಿರುವ ಬೇಕವಾಡ ಗ್ರಾಮದ ರುದ್ರಭೂಮಿಯಲ್ಲಿ ಜಂಬೂರಿ ಇಟ್ಟಿಗೆಯಿಂದ ನಿರ್ಮಾಣವಾಗಿರುವ ಐದು ಅಡಿ ಎತ್ತರದ ಚಿಕ್ಕ ದೇವಾಲಯದಲ್ಲಿ ಒಂದು ಅಡಿ ಎತ್ತರದ ರಾಮನ ವಿಗ್ರಹವಿದ್ದು, ಇದನ್ನು ಸಂರಕ್ಷಿಸಬೇಕು ಮತ್ತು ದೇವಾಲಯ ಭಾಗವನ್ನು ಉತ್ಖನನಗೊಳಿಸಿ ಜೀರ್ಣೋದ್ಧಾರ ಮಾಡಬೇಕು ಎಂದು ಡಾ. ಹಂದೂರ ಪುರಾತತ್ವ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಬೇಕವಾಡದಲ್ಲಿ ಪತ್ತೆಯಾಗಿರುವ ರಾಮನ ವಿಗ್ರಹದ ಎಡಗೈಯಲ್ಲಿ ಬಿಲ್ಲು ಬಾಣಗಳಿವೆ. ಕೊರಳಲ್ಲಿ ಆಭರಣಗಳನ್ನು ಕೆತ್ತಲಾಗಿದೆ. ಇದು ರಾಮನು ವನವಾಸದ ಅವಧಿಯಲ್ಲಿ ಆಯುಧಗಳ ಸಮೇತ ಸಂಚರಿಸುವುದನ್ನು ಸ್ಪಷ್ಟಪಡಿಸುತ್ತದೆ. ರಾಮನ ದೇವಾಲಯದ ಹಿಂಬದಿಯಲ್ಲಿ ಸೀತಾದೇವಿಯ ದೇವಾಲಯವಿದ್ದು, ಇದನ್ನೂ ಸಹ ಜಂಬೂರಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಸೀತೆಯ ದೇವಾಲಯದಲ್ಲಿ ಯಾವುದೇ ವಿಗ್ರಹ ಇಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಶ್ರೀ ರಾಮ ಲಂಕೆಗೆ ಹೋಗುವ ಸಂದರ್ಭದಲ್ಲಿ ಈ ಭಾಗಕ್ಕೆ ಭೇಟಿ ನೀಡಿರುವ ಸಾಧ್ಯತೆಗಳಿವೆ. ಈ ಗ್ರಾಮದಲ್ಲಿ ರಾಮ-ಸೀತಾ ದೇವಾಲಯದದ ಮಾದರಿಯಂತೆ ಹಲವಾರು ಜಂಬೂರಿ ಇಟ್ಟಿಗೆಯಿಂದ ನಿರ್ಮಾಣವಾದ ದೇವಾಲಯಗಳು ಇದ್ದು, ಇವುಗಳು ನಮ್ಮ ಗತಕಾಲದ ಇತಿಹಾಸವನ್ನು ಸಾರಿ ಹೇಳುತ್ತಿವೆ. ಆದರೆ ಬೇಕವಾಡ ಗ್ರಾಮಸ್ಥರಿಗೆ ತಮ್ಮೂರಿನ ಐತಿಹಾಸಿಕ ಸ್ಥಳಗಳ ಮಹತ್ವದ ಕುರಿತು ಅರಿವು ಇಲ್ಲದಿರುವ ಕಾರಣ ದೇವಾಲಯ ಇರುವ ಜಾಗದಲ್ಲಿ ಹೆಣಗಳನ್ನು ಸುಡುತ್ತಿದ್ದಾರೆ ಎಂದು ಡಾ. ಹಂದೂರ ಬೇಸರ ವ್ಯಕ್ತಪಡಿಸಿದರು.