For the best experience, open
https://m.samyuktakarnataka.in
on your mobile browser.

೭೦ರ ದಶಕದ ಹೋರಾಟ ಮರುಕಳಿಸಬೇಕಿದೆ…

03:30 AM Nov 01, 2024 IST | Samyukta Karnataka
೭೦ರ ದಶಕದ ಹೋರಾಟ ಮರುಕಳಿಸಬೇಕಿದೆ…

ಕನ್ನಡ ಚಳವಳಿ, ಕನ್ನಡಕ್ಕಾಗಿ ಚಳವಳಿ, ಕನ್ನಡಿಗರಿಗಾಗಿ ಚಳವಳಿ, ಕನ್ನಡ ಉಳಿವಿಗಾಗಿ ನಿರಂತರ ಚಳವಳಿ ನಡೆದವು. ಒಂದೊಂದು ಹೋರಾಟದಲ್ಲೂ ಸಾವಿರಾರು ಜನರು ಭಾಗಿಯಾಗುತ್ತಿದ್ದರು. ಭಾಷಾಭಿಮಾನ ಹುಚ್ಚೆದ್ದು ಕುಣಿಯುವಂತಿತ್ತು. ಸಂಘರ್ಷ, ಬಂಧನ, ಬೂಟೇಟು, ಜೈಲು.. ಇವುಗಳೆಲ್ಲದರ ಸ್ವರೂಪ ಅದ್ಭುತ. ಕನ್ನಡ ಚಳವಳಿ ಅಂದರೆ ನೂರ್ಮಡಿ ಶಕ್ತಿ ಬರುತ್ತಿತ್ತು. ರೈಲು, ರಸ್ತೆ ತಡೆ, ಪ್ರಾಣಿಗಳ ಜೊತೆ ಚಳವಳಿ, ವೇಷ ಮರೆಸಿ ನಡೆಸಿದ ಚಳವಳಿ ೭೦-೮೦ರ ದಶಕದಲ್ಲಿ ಇವೆಲ್ಲ ಹೋರಾಟ ನಡೆದಿದ್ದರ ಪರಿಣಾಮವೇ ಇವತ್ತು ಇಷ್ಟರಮಟ್ಟಿಗಾದರೂ ಕನ್ನಡ ಉಳಿದಿದೆ.
ಹೋರಾಟದ ಇತಿಹಾಸ ಅದ್ಭುತ
ಕುವೆಂಪು, ಪಾವಟೆ, ಬೇಂದ್ರೆ, ಮಾಸ್ತಿ ಎಲ್ಲರ ಪ್ರೀತಿಗೆ ಕನ್ನಡಪರ ಹೋರಾಟ ಮೆಚ್ಚುಗೆಗೆ ಪಾತ್ರವಾಗಿತ್ತು. ಶಾಂತವೇರಿ ಗೋಪಾಲಗೌಡರು, ಎಸ್. ನಿಜಲಿಂಗಪ್ಪ, ಕೆ.ಸಿ.ರೆಡ್ಡಿ, ದೇವರಾಜ ಅರಸು, ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ, ಜೆ.ಹೆಚ್. ಪಟೇಲ್ ಹೀಗೆ ಎಲ್ಲರಿಂದಲೂ ಕನ್ನಡ ಚಳವಳಿಗೆ ಅಪಾರ ಬೆಂಬಲ ಸಿಕ್ಕಿತ್ತು. ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ನಾನು ಮೊದಲ ಬಾರಿಗೆ ವಿಧಾನಸಭೆಗೆ ಚಿಕ್ಕಪೇಟೆ ಕ್ಷೇತ್ರದಿಂದ ಆಯ್ಕೆಯಾಗಿ ಬಂದೆ. ಒಂದೇ ಒಂದು ಅಧಿವೇಶನಕ್ಕೆ ನಾನು ಗೈರಾದವನಲ್ಲ. ಕನ್ನಡದ ವಿಷಯಕ್ಕೆ ನಿಜಲಿಂಗಪ್ಪ ಅವರನ್ನೂ ಅನೇಕ ಬಾರಿ ಟೀಕಿಸಿದ್ದೇನೆ. ತರಾಟೆಗೆ ತೆಗೆದುಕೊಂಡಿದ್ದೇವೆ. ಅಬ್ಬಾ.. ಅವೆಲ್ಲವೂ ಅದ್ಭುತ ಇತಿಹಾಸ.
ಪುಡಿಗಳಿಂದಲೇ ಕನ್ನಡ ಉಳಿದಿದೆ
ಡಾ.ರಾಜ್‌ಕುಮಾರ್ ಅಭಿನಯದ ರಣಧೀರ ಕಂಠೀರವ ಚಿತ್ರ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ಹಿಮಾಲಯ ಥಿಯೇಟರ್ ಕೊಡಿಸಿದ್ದೇ ವಾಟಾಳ್ ನಾಗರಾಜ್. ಆನಂತರ ೧೯೬೨ ಸೆಪ್ಟಂಬರ್ ೭ರಂದು ಚಿತ್ರಮಂದಿರಕ್ಕೆ ನುಗ್ಗಿ ಬೆಂಕಿಇಟ್ಟಿದ್ದೆವು. ಬೂಟೇಟು, ಬಂದೂಕು ಗುಂಡು ಬಿದ್ದರೂ ನನ್ನ ರಕ್ತ ಕನ್ನಡ ಎಂದು ಘೋಷಿಸಿದ್ದೆ. ನನ್ನೊಂದಿಗಿದ್ದ ಯುವಕರನ್ನು ಪುಡಿಗಳೆಂದು ಅವಹೇಳನ ಮಾಡಿದರು. ಆದರೆ ಅವರಿಂದಲೇ ಇವತ್ತು ಕನ್ನಡ ಉಳಿದಿದೆ. ೧೯೬೪ರಲ್ಲಿ ನನಗೆ ೨೧ನೇ ವಯಸ್ಸಿನಲ್ಲಿ ಕಾರ್ಪೊರೇಟರ್ ಆದೆ. ೧೯೬೭ರಲ್ಲಿ ೨೫ನೇ ವಯಸ್ಸಿಗೆ ಶಾಸಕನಾದೆ. ಚಾಮರಾಜನಗರದ ತಮಿಳುನಾಡು ಗಡಿಯ ತಾಳವಾಡಿ ಕರ್ನಾಟಕಕ್ಕೆ ಸೇರಬೇಕೆಂದು ಭಾರಿ ಹೋರಾಟ ಮಾಡಿದೆವು. ನಮ್ಮನ್ನೆಲ್ಲ ಬಂಧಿಸಿದರು. ಇಡೀ ರಾಜ್ಯ ವಾಟಾಳ್ ನಾಗರಾಜ್ ಅವರನ್ನು ಬಿಡುಗಡೆ ಮಾಡಬೇಕೆಂದು ನಟ ಉದಯ್‌ಕುಮಾರ್, ಗೋಪಾಲಗೌಡರು, ನಂಜೇಗೌಡರ ಸಾರಥ್ಯದಲ್ಲಿ ದೊಡ್ಡ ಚಳವಳಿ ಆಯಿತು. ಸಿಎಂ ವೀರೇಂದ್ರ ಪಾಟೀಲ್ ಅಲ್ಲಿನ ಸಿಎಂ ಕರುಣಾನಿಧಿ ಜೊತೆ ಮಾತನಾಡಿ ಬಿಡುಗಡೆ ಮಾಡಿಸಿದರು. ಬಳಿಕ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಆ ಕಾಲದಲ್ಲಿ ೨೦ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಬೃಹತ್ ಸಭೆ ನಡೆಯಿತು. ಹೀರೋ ವೆಲ್‌ಕಮ್ ಎಂದು ಮಾಧ್ಯಮಗಳು ಪ್ರಶಂಸಿಸಿದವು.
ಕೇಂದ್ರ ಗೃಹಸಚಿವ ವೈ.ಬಿ.ಚೌಹಾಣ್ ಬೆಂಗಳೂರಿನ ರಾಜಭವನಕ್ಕೆ ಭೇಟಿ ಕೊಟ್ಟಾಗ ಆಕಾಶವಾಣಿಯಲ್ಲಿ ಅಡಗಿ ಕುಳಿತು ಸಚಿವರ ಕಾರಿಗೆ ಅಡ್ಡಬಿದ್ದು ಮಹಾರಾಷ್ಟ್ರ ವಿರೋಧಿ ನಿಲುವಿಗಾಗಿ ಪ್ರತಿಭಟಿಸಿದ್ದೆ. ದೆಹಲಿಯಲ್ಲಿ ಸಂಸತ್ ಎದುರು ಬಂಗಾರಪ್ಪ ಜೊತೆ ಹೋರಾಟ ಮಾಡಿದೆ. ಬಂಧಿಸಿದರು. ಸಂಸದರಾದ ಜೆ.ಹೆಚ್. ಪಟೇಲ್, ಜಾರ್ಜ್ ಫನಾಂಡಿಸ್ ಬೆಂಬಲಿಸಿದ್ದರು. ೧೯೬೨ರಿಂದ ಇಲ್ಲಿಯವರೆಗೆ ನಿರಂತರವಾಗಿ ರಾಜ್ಯೋತ್ಸವ ಆಚರಿಸಿಕೊಂಡು ಬಂದಿರುವ ಏಕೈಕ ಸಂಘಟನೆ ಮತ್ತು ವ್ಯಕ್ತಿ ವಾಟಾಳ್ ನಾಗರಾಜ್.
ಒಬ್ಬ ಕನ್ನಡಿಗ ಐವರು ಪರಭಾಷಿಕರು
ಅನಕೃ ಮತ್ತು ರಾಮಮೂರ್ತಿ ಅವರು ರಾಮೋತ್ಸವದ ಬಳಿಕ ನಿರಂತರವಾಗಿ ಬೀದಿಬೀದಿಗಳಲ್ಲಿ ಕನ್ನಡಪರ ಚಳವಳಿ ನಡೆಸಿದರು. ಹಿರಿಯ ಪತ್ರಕರ್ತರಾದ ಆರ್.ಆರ್.ದಿವಾಕರ್ ನಮ್ಮ ಹೋರಾಟದ ಪರವಾಗಿ ಕನ್ನಡ ಧ್ವಜಾರೋಹಣ ಮಾಡಿದ್ದರು. ಕನ್ನಡಪರ ಹೋರಾಟ ಅವತ್ತಿಗೂ ಇವತ್ತಿಗೂ ಭಾರಿ ವ್ಯತ್ಯಾಸವಾಗಿದೆ. ಭಾಷೆ ಅಂತ ಬಂದಾಗ ಜನ ಬೀದಿಗೆ ಬರಬೇಕು. ದುರಂತ ಎಂದರೆ ಒಬ್ಬ ಕನ್ನಡಿಗನಿಗೆ ಐವರು ಪರಭಾಷಿಕರಿದ್ದಾರೆ. ಒಂದೂವರೆ ಕೋಟಿ ಜನರಿರುವ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ೪೦ ಲಕ್ಷದ ಆಸುಪಾಸಿನಲ್ಲಿದೆ. ಕನ್ನಡಪರ ಹೋರಾಟಕ್ಕೆ ಜಾಗವೇ ಇಲ್ಲ. ಪ್ರತಿಭಟನೆಗಳನ್ನು ಹತ್ತಿಕ್ಕುವ ವ್ಯವಸ್ಥಿತ ಹುನ್ನಾರ ನಡೆದಿದೆ. ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ಚಳವಳಿಗೆ ಕೊಡುತ್ತಿಲ್ಲ. ಎಲ್ಲಿದೆ ಸ್ವಾತಂತ್ರ್ಯ? ಕನ್ನಡಪರ ಹೋರಾಟಗಳನ್ನು ದಮನಗೊಳಿಸುವ ಕೆಲಸ ಅಧಿಕಾರ ನಡೆಸುವವರಿಂದಲೇ ನಡೆಯುತ್ತಿದೆ.
ಪೊಲೀಸರಿಗೆ ನೂರಾರು ಬಾರಿ ಚಳ್ಳೆಹಣ್ಣು ತಿನ್ನಿಸಿ ಹೋರಾಟ ರೂಪಿಸಿದ್ದೇವೆ. ಜನ ಬೆಂಬಲ ವ್ಯಾಪಕವಾಗುತ್ತಿದ್ದಂತೆ ೧೯೭೩ರಿಂದ ನನ್ನ ವಿರುದ್ಧ ದ್ವೇಷ ಶುರುವಾಯಿತು. ಕನಿಷ್ಠ ಮತ್ತು ಅನಿಷ್ಠ ಚಿಂತನೆಗಳು ಆರಂಭವಾದವು. ೬ ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಪಿತೂರಿ ನಡೆಸಿದರು. ಚಳವಳಿ ಹತ್ತಿಕ್ಕುವ ಕೆಲಸ ದೊಡ್ಡಮಟ್ಟದಲ್ಲಿ ನಡೆಯಿತು. ಕಿರುಕುಳ ಕೊಡಲಾಯಿತು. ರಾಜಕೀಯ ಪಕ್ಷಗಳು ನಮ್ಮ ಹೋರಾಟಕ್ಕೆ ಬೆಚ್ಚಿಬಿದ್ದಿದ್ದವು. ಸಮುದ್ರದಲ್ಲಿ ಈಜಿದ್ದೇನೆ. ೭೦ರ ದಶಕದ ರೀತಿಯ ಹೋರಾಟ ಈಗ ಬೇಕಾಗಿದೆ. ಆದರೆ ಸರ್ಕಾರಗಳಿಗೆ ಬೇಕಾಗಿಲ್ಲ. ಜನರಿಗೂ ಬೇಕಾಗಿಲ್ಲವೇನೋ ಎನಿಸುತ್ತಿದೆ.
ಕನ್ನಡಪರ ಹೋರಾಟ ನನ್ನ ಹಕ್ಕು
ಸುವರ್ಣ ಕರ್ನಾಟಕದ ಸಂಭ್ರಮ ಎಲ್ಲಿದೆ? ಕೇವಲ ಸರ್ಕಾರದ ಜಾಹೀರಾತಿನಲ್ಲಿದೆ? ಕನ್ನಡ ಬಾವುಟ ಕಟ್ಟಿದರೆ ಭಾಷೆ ಉಳಿದೀತೆ? ಕನ್ನಡ ಉಳಿವಿಗೆ ಸಮಗ್ರ ಮಸೂದೆ ಅನುಷ್ಠಾನ ಮಾಡಲಾಗದ ಸರ್ಕಾರ ಏಕಿರಬೇಕು. ಕನ್ನಡದ ಪರ ಹೋರಾಟ ಮಾಡುವ ಹಕ್ಕು, ಶಕ್ತಿ, ಚಿಂತನೆ ನನಗಿದೆ. ನೂರಾರು ಬಾರಿ ಲಾಕ್‌ಪ್ ಸೇರಿದ್ದೇನೆ. ನನ್ನ ವಿರುದ್ಧ ದಾಖಲಾಗಿರುವ ಕೇಸ್‌ಗಳು ಅಸಂಖ್ಯ. ಯಾರೇನೇ ಮಾಡಿದರೂ ಕನ್ನಡದ ಚಳವಳಿ ನಿಲ್ಲಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವುದು ಕೇವಲ ಘೋಷಣೆ ಆದರೆ ಸಾಲದು ಅನುಷ್ಠಾನ ಆಗಬೇಕು. ಸರ್ಕಾರ ಗಂಭೀರ ಚಿಂತನೆ ನಡೆಸಲಿ. ಕನ್ನಡಿಗರು ಬೀದಿಗಿಳಿದು ಮತ್ತೊಮ್ಮೆ ಚಳವಳಿ ನಡೆಸಲಿ.