11ರಂದು ದೇವರಗುಡ್ಡದಲ್ಲಿ ಕಾರಣಿಕ
ರಾಣೇಬೆನ್ನೂರು: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿಯ ದಸರಾ ಹಬ್ಬದ ಪ್ರಯುಕ್ತ ಅ. ೧೧ರಂದು ಕಾರ್ಣಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಮಹಾನವಮಿ ಸಂಜೆ ೬ಗಂಟೆಗೆ ಗೊರವಯ್ಯ ಅವರು ನುಡಿಯುವ ಕಾರ್ಣಿಕದ ಮೇಲೆ ಜನರಿಗೆ ಮೊದಲಿಂದಲೂ ಅಪಾರ ನಂಬಿಕೆಯಿದೆ. ರಾಜ್ಯದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯ ಜನಸಾಗರ ಹರಿದುಬಂದಿತ್ತು. ಪ್ರತಿ ವರ್ಷ ಆಯುಧ ಪೂಜೆಯ ದಿನ ದೇವರಗುಡ್ಡದ ಕಾರ್ಣಿಕೋತ್ಸವ ನಡೆಯುತ್ತದೆ. ಮೈಲಾರದ ಕಾರ್ಣಿಕ ಮುಂಗಾರು ಮಳೆಯ ಭವಿಷ್ಯವಾಣಿ ಎಂದು ನಂಬಿದರೆ. ದೇವರಗುಡ್ಡದ ಕಾರ್ಣಿಕೋತ್ಸವವನ್ನು ಹಿಂಗಾರಿನ ಭವಿಷ್ಯವಾಣಿ' ಎಂದು ನಂಬಲಾಗುತ್ತದೆ.
ಕಾರ್ಣಿಕ ಅಜ್ಜನವರಿಂದ ಕಾರ್ಣಿಕೋತ್ಸವ ಉತ್ತರ ಕರ್ನಾಟಕದ ಹಿಂಗಾರಿನ ಭವಿಷ್ಯ ನುಡಿ ಎಂದು ಜನರು ಭಾವಿಸುತ್ತಾರೆ. ಕಳೆದ ಬಾರಿ `ಮುಕ್ಕೋಟಿ ಚೆಲ್ಲಿತಲೆ ಕಲ್ಯಾಣ ಕಟ್ಟಿತಲೆ ಪರಾಕ್' ಎಂದು ಕಾರಣಿಕವಾಗಿತ್ತು. ಈ ಬಾರಿ ಕಾರಣಿಕ ಹಲವು ವಿಶೇಷತೆ ಸಾಕ್ಷಿಯಾಗಲಿದೆ. ಈ ನಿಟ್ಟಿನಲ್ಲಿ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ. ಕಾರ್ಣಿಕೋತ್ಸವಕ್ಕೆ ಈಗಾಗಲೇ ಮಾಲತೇಶ ದೇವಸ್ಥಾನ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದ್ದು. ಎಲ್ಲರ ಗಮನ ಕಾರ್ಣಿಕದ ಮೇಲಿದೆ.
ಅ. ೧೨ರಂದು ವಿಜಯದಶಮಿ ಸಂಜೆ ೪ ಗಂಟೆಯಿಂದ ಕಂಚವೀರರಿಂದ ಶಸ್ತ್ರ ಪವಾಡಗಳು, ಗೊರವಯ್ಯರಿಂದ ಸರಪಳಿ ಪವಾಡಗಳು, ನಂತರ ಸಂಜೆ ೬ ಗಂಟೆಗೆ ಬನ್ನಿ ಮುಡಿಯುವುದು. ಅ. ೧೭ರಂದು ಶಿಗಿ ಹುಣ್ಣಿಮೆ ಹಾಗೂ ಅ. ೨೫ರಂದು ಕುದುರೆ ಹಬ್ಬ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.