2-3 ದಿನಗಳಲ್ಲಿ ಚನ್ನಪಟ್ಟಣ ಅಭ್ಯರ್ಥಿ ಗೊಂದಲ ಇತ್ಯರ್ಥ
ನವದೆಹಲಿ: ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ. ಹಾಗಾಗಿ NDA ಅಭ್ಯರ್ಥಿ ಆಯ್ಕೆಗೆ ಎಲ್ಲರೂ ಸೇರಿ ತೀರ್ಮಾನ ಮಾಡಬೇಕಾಗುತ್ತದೆ. ಎರಡ್ಮೂರು ದಿನದಲ್ಲಿ ಗೊಂದಲ ಬಗೆಹರಿಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಚನ್ನಪಟ್ಟಣ ಅಭ್ಯರ್ಥಿ ಆಯ್ಕೆಗೆ ಬಿಜೆಪಿ, ಜೆಡಿಎಸ್ ಸೇರಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಈಗಾಗಲೇ ನಾನು, ರಾಜ್ಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜತೆ ಚರ್ಚಿಸಿದ್ದೇವೆ. ವಿಜಯೇಂದ್ರ ಎಚ್ಡಿಕೆ ಅವರೊಂದಿಗೂ ಮಾತನಾಡಿದ್ದಾರೆ ಎಂದು ಹೇಳಿದರು.
ಹೈಕಮಾಂಡ್ ಜತೆ ಚರ್ಚೆ ನಡೆದಿದೆ: ಎಚ್ಡಿಕೆ ಮತ್ತು ವಿಜಯೇಂದ್ರ ಇಬ್ಬರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜತೆ ಮಾತುಕತೆ ನಡೆಸಿದ್ದಾರೆ. ಎಚ್ಡಿಕೆ ತಮ್ಮ ಅಂತಿಮ ನಿರ್ಧಾರವನ್ನು ಇನ್ನೂ ತಿಳಿಸಿಲ್ಲ. ಇನ್ನು ಎರಡ್ಮೂರು ದಿನಗಳಲ್ಲಿ ತಿಳಿಸಬಹುದು ಎಂದು ಜೋಶಿ ಹೇಳಿದರು.
ಯೋಗೇಶ್ವರ್ ಆದರೆ ಒಳ್ಳೇದು: ಚನ್ನಪಟ್ಟಣಕ್ಕೆ ಸಿ.ಪಿ. ಯೋಗೇಶ್ವರ್ NDA ಅಭ್ಯರ್ಥಿ ಆಗಬೇಕು. ಆದರೆ ಒಳ್ಳೆಯದು. ಆದರದು ಕುಮಾರಸ್ವಾಮಿ ಅವರ ಕ್ಷೇತ್ರ. ಹೀಗಾಗಿ ಅವರ ನಿರ್ಧಾರವೂ ಪ್ರಮುಖವಾಗುತ್ತದೆ ಎಂದು ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ಚನ್ನಪಟ್ಟಣ ಸೇರಿದಂತೆ ರಾಜ್ಯದಲ್ಲಿ ಸಂಡೂರು, ಶಿಗ್ಗಾಂವಿ ಯಾವುದೇ ಕ್ಷೇತ್ರವಿರಲಿ ಅಭ್ಯರ್ಥಿ ಆಯ್ಕೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧಾರ ಎಂದ ಜೋಶಿ, ಬಿಜೆಪಿ ವರಿಷ್ಠರು ಜೆಡಿಎಸ್ ರಾಜ್ಯಾಧ್ಯಕ್ಷರು ಆಗಿರುವ ಎಚ್ಡಿಕೆ ಅವರೊಂದಿಗೆ ಚರ್ಚಿಸಿಯೇ ಅಭ್ಯರ್ಥಿ ಆಯ್ಕೆ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
48 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಒಟ್ಟಿಗೇ ಪ್ರಕಟ:
ವಿಧಾನಸಭೆ ಉಪ ಚುನಾವಣೆಗೆ ದೇಶದ 48 ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೇ ಬಿಡುಗಡೆ ಆಗೋ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಕರ್ನಾಟಕದ ಮೂರು ಕ್ಷೇತ್ರಗಳೂ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಬಿಜೆಪಿ ಶೀಘ್ರವೇ ಅಭ್ಯರ್ಥಿಗಳನ್ನು ಹೆಸರಿಸಲಿದೆ ಎಂದು ಹೇಳಿದರು.