24ರಂದು ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ
ಶ್ರೀರಂಗಪಟ್ಟಣ: ಡಿ. 24ರಂದು ಶ್ರೀರಂಗಪಟ್ಟಣದಲ್ಲಿ ಸಾವಿರಾರು ಹನುಮ ಮಾಲಾಧಾರಿಗಳಿಂದ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಜಾಮಿಯಾ ಮಸೀದಿಗೆ ಪೊಲೀಸರು ಸರ್ಪಗಾವಲು ಏರ್ಪಡಿಸುವ ಮೂಲಕ ಬೀಗಿ ಬಂದೋಬಸ್ತ್ ಒದಗಿಸಲಾಗಿದೆ.
ಗಂಜಾಂನ ಶ್ರೀ ನಿಮಿಷಾಂಬ ದೇವಸ್ಥಾನದ ಬಳಿಯ ಆಂಜನೇಯ ಸ್ವಾಮಿ ದೇಗುಲದಿಂದ ಸಂಕೀರ್ತನ ಯಾತ್ರೆ ಆರಂಭಗೊಂಡು, ಪಟ್ಟಣದ ಮುಖ್ಯದ್ವಾರದ ಮೂಲಕ ಪುರಸಭೆ ವೃತ್ತ ಸೇರಿದಂತೆ ಮುಖ್ಯ ರಸ್ತೆಯಲ್ಲಿನ ಮೂಡಲ ಬಾಗಿಲು ಆಂಜನೇಯ ದೇವಾಲಯದ ಮಾರ್ಗವಾಗಿ ಶ್ರೀರಂಗನಾಥಸ್ವಾಮಿ ದೇಗುಲದ ಬಳಿ ಅಂತ್ಯಗೊಳ್ಳಲಿದೆ.
ಗಂಜಾಂನ ನಿಮಿಷಾಂಬ ದೇವಾಲಯದ ಬಳಿಯ ಆಂಜನೇಯ ಸ್ವಾಮಿ ದೇವಾಲಯದ ಆವರಣ, ಪಟ್ಟಣದ ಪುರಸಭೆ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ಮೆರವಣಿಗೆ ಸಾಗುವ ಪ್ರಮುಖ ವೃತ್ತಗಳಲ್ಲಿ ಹನುಮ ಮಾಲಾಾರಿಗಳು ಕೇಸರಿ ಬಣ್ಣದ ಭಾವುಟಗಳನ್ನ ಕಟ್ಟಿ, ತಳಿರು ತೋರಣಗಳಿಂದ ಸಿಂಗಾರಗೊಳಿಸಿದ್ದಾರೆ.
ಪೊಲೀಸ್ ಪೆರೇಡ್:
ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ನೇತತ್ವದಲ್ಲಿ ಸಾವಿರಾರು ಪೊಲೀಸರು ಮೆರವಣಿಗೆ ಸಾಗುವ ಮಾರ್ಗದಲ್ಲಿ ಪಥ ಸಂಚಲನ ನಡೆಸಿ ಜಾಗೃತಿ ಮೂಡಿಸಿದರು.